ADVERTISEMENT

ಸರ್ಕಾರಿ ಎಂಜಿನಿಯರ್‌ ವಿರುದ್ಧ ಪೋಕ್ಸೊ ಪ್ರಕರಣ

ಕಳೆದ 10 ವರ್ಷದಿಂದ 50ಕ್ಕೂ ಅಧಿಕ ಮಕ್ಕಳಿಗೆ ಲೈಂಗಿಕ ಶೋಷಣೆ

ಪಿಟಿಐ
Published 27 ಜನವರಿ 2021, 15:04 IST
Last Updated 27 ಜನವರಿ 2021, 15:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಂದಾ(ಉತ್ತರ ಪ್ರದೇಶ): ಮಕ್ಕಳನ್ನು ಲೈಂಗಿಕ ಶೋಷಣೆಗೆ ಬಳಸಿಕೊಂಡ ಆರೋಪದಡಿ ಸರ್ಕಾರಿ ಎಂಜಿನಿಯರ್‌ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೋಕ್ಸೊ ನ್ಯಾಯಾಲಯವು ಆರು ಮಕ್ಕಳ ಹೇಳಿಕೆಗಳನ್ನು ಬುಧವಾರ ದಾಖಲಿಸಿಕೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಕಳೆದ 10 ವರ್ಷದಿಂದ ಮಕ್ಕಳನ್ನು ಲೈಂಗಿಕ ಶೋಷಣೆಗೆ ಬಳಸಿಕೊಂಡು ಅದರ ವಿಡಿಯೊಗಳನ್ನು ಇಂಟರ್‌ನೆಟ್‌ ಮೂಲಕ ಮಾರಾಟ ಮಾಡಿದ ಆರೋಪದಡಿ ಎಂಜಿನಿಯರ್‌ ಹಾಗೂ ಅವರ ಪತ್ನಿಯನ್ನು ಬಂಧಿಸಿದೆ. ಈ ಹಿಂದೆ ತನಿಖಾ ಸಂಸ್ಥೆಯು 17 ಮಕ್ಕಳ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಿತ್ತು.

ಉತ್ತರ ಪ್ರದೇಶ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಮ್‌ ಭವನ್‌ ಎಂಬುವವರನ್ನು ನ.16ರಂದು ಬಂಧಿಸಲಾಗಿತ್ತು. ನಂತರದಲ್ಲಿ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ದುರ್ಗಾವತಿಯನ್ನು ಡಿ.28ರಂದು ಸಿಬಿಐ ಬಂಧಿಸಿತ್ತು. ಚಿತ್ರಕೂಟ, ಬಾಂದಾ ಹಾಗೂ ಹಮಿರ್‌ಪುರ ಜಿಲ್ಲೆಯಲ್ಲಿ ಐದರಿಂದ 16 ವರ್ಷದ 50ಕ್ಕೂ ಅಧಿಕ ಮಕ್ಕಳನ್ನು ಇವರು ಲೈಂಗಿಕ ಶೋಷಣೆಗೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಶೋಧದ ವೇಳೆ ಎಂಟು ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಲೈಂಗಿಕ ಶೋಷಣೆಯ ದೃಶ್ಯಗಳಿದ್ದ ಡಿಜಿಟಲ್‌ ಸಾಕ್ಷ್ಯಗಳನ್ನು ಸಿಬಿಐ ಪತ್ತೆಹಚ್ಚಿತ್ತು.

ADVERTISEMENT

ತಾವು ನಡೆಸುತ್ತಿರುವ ಚಟುವಟಿಕೆಗಳನ್ನು ಮರೆಮಾಚಲು ಮೊಬೈಲ್‌ ಫೋನ್‌ ಮತ್ತು ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಮಕ್ಕಳಿಗೆ ನೀಡುತ್ತಿರುವುದರ ಕುರಿತು ರಾಮ್‌ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.