ಪ್ರಾತಿನಿಧಿಕ ಚಿತ್ರ
ಮುಜಾಫರಬಾದ್: ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಭಾರತ ದಾಳಿ ನಡೆಸುವ ಭಯದಿಂದ ಪಾಕ್ ಆಕ್ರಮಿತ ಕಾಶ್ಮಿರದಲ್ಲಿ (ಪಿಒಕೆ) 10 ದಿನಗಳ ಕಾಲ ಎಲ್ಲಾ ಮದರಸಾಗಳನ್ನು ಬಂದ್ ಮಾಡಿ ಪಿಒಕೆ ಸ್ಥಳೀಯ ಆಡಳಿತ ಆದೇಶಿಸಿದೆ.
‘ಪಹಲ್ಗಾಮ್‌ನಲ್ಲಿ ದಾಳಿ ನಡೆಸಿರುವ ಉಗ್ರರು ಪಿಒಕೆಯಲ್ಲಿರುವ ಮದರಸಾಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಭಾರತ ಸರ್ಕಾರ ಆರೋಪಿಸಿದ್ದು ಶೀಘ್ರದಲ್ಲಿ ದಾಳಿ ನಡೆಸಲಿದೆ ಎಂದು ಇಸ್ಲಾಮಾಬಾದ್‌ನ ವಿಶ್ವಾಸಾರ್ಹ ಮೂಲಗಳು ತಿಳಿಸಿರುವುದಾಗಿ ಪಿಒಕೆಯ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನಿ ಕಾಶ್ಮೀರದ ಧಾರ್ಮಿಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ಹಫೀಜ್ ನಜೀರ್ ಅಹಮದ್ ಮಾತನಾಡಿ, ‘ಭಾರತದ ಸೇನೆ ಮದರಸಾಗಳ ಮೇಲೆ ದಾಳಿ ನಡೆಸಿ, ಅವುಗಳಿಗೆ ಉಗ್ರರ ತರಬೇತಿ ಕೇಂದ್ರ ಎಂದು ಹಣೆಪಟ್ಟಿ ಕಟ್ಟುತ್ತಾರೆ ಎನ್ನುವ ಭಯ ಪಿಒಕೆ ಭದ್ರತಾ ಅಧಿಕಾರಿಗಳಿಗೆ ಕಾಡುತ್ತಿದೆ. ಸದ್ಯಕ್ಕೆ ನಾವು ಎರಡು ರೀತಿಯ ಬಿಸಿಯನ್ನು ಎದುರಿಸುತ್ತಿದ್ದೇವೆ, ಮೊದಲನೆಯದು ವಾತಾವರಣದ ಬಿಸಿಯಾದರೆ ಮತ್ತೊಂದು ಭಾರತದ ಪ್ರಧಾನಿ ನರೇಂದ್ರ ಮೋದಿಯದ್ದು’ ಎಂದು ಹೇಳಿದ್ದಾರೆ.
‘ನಾವು ನಿನ್ನೆ ಸಭೆ ನಡೆಸಿದ್ದೇವೆ, ಪಿಒಕೆಯಲ್ಲಿರುವ ಅಮಾಯಕ ಮಕ್ಕಳನ್ನು ಅಪಾಯಕ್ಕೆ ದೂಡಲು ಸಾಧ್ಯವಿಲ್ಲ, ಪಾಕಿಸ್ತಾನ ಆಕ್ರಮಿತ ಕಾಶ್ಮೀರಿ ಅಧ್ಯಕ್ಷರ ಕಚೇರಿಯನ್ನೂ ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿದೆ’ ಎಂದು ಹಫೀಜ್ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಟ್ಟು 445 ನೋಂದಾಯಿತ ಮದರಸಾಗಳಿದ್ದು, 26 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಧಾರ್ಮಿಕ ಇಲಾಖೆ ಹೇಳಿದೆ.
ಭಾರತದ ವಿದೇಶಾಂಗ ಸಚಿವಾಲಯ ಈ ಕುರಿತು ಪ್ರತಿಕ್ರಿಯೆಗೆ ತಕ್ಷಣಕ್ಕೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.