ADVERTISEMENT

ಹತ್ತು ದಿನಗಳ ಪೊಲೀಸ್‌ ಕಸ್ಟಡಿಗೆ ಜೆಎನ್‌ಯು ಹಳೆ ವಿದ್ಯಾರ್ಥಿ ಉಮರ್‌ ಖಾಲಿದ್‌

ಪಿಟಿಐ
Published 14 ಸೆಪ್ಟೆಂಬರ್ 2020, 13:15 IST
Last Updated 14 ಸೆಪ್ಟೆಂಬರ್ 2020, 13:15 IST
ದೆಹಲಿಯಲ್ಲಿ ಜನವರಿಯಲ್ಲಿ ನಡೆದ ಪ್ರತಿಭಟನೆಯೊಂದರ ವೇಳೆ ಪೊಲೀಸರು ಉಮರ್‌ ಖಾಲಿದ್‌ರನ್ನು ವಶಕ್ಕೆ ಪಡೆಯುತ್ತಿರುವುದು–ಪಿಟಿಐ ಸಂಗ್ರಹ ಚಿತ್ರ
ದೆಹಲಿಯಲ್ಲಿ ಜನವರಿಯಲ್ಲಿ ನಡೆದ ಪ್ರತಿಭಟನೆಯೊಂದರ ವೇಳೆ ಪೊಲೀಸರು ಉಮರ್‌ ಖಾಲಿದ್‌ರನ್ನು ವಶಕ್ಕೆ ಪಡೆಯುತ್ತಿರುವುದು–ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ದೆಹಲಿಯ ಗಲಭೆಗೆ ಸಂಬಂಧಿಸಿದಂತೆ ಜವಾಹರ್‌ಲಾಲ್‌ ನೆಹರೂ ಯೂನಿವರ್ಸಿಟಿಯ ಮಾಜಿ ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ಅವರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ.

ಗಲಭೆಯಲ್ಲಿ ಪಾತ್ರವಿರುವ ಆರೋಪಗಳ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಉಮರ್‌ರನ್ನು ಬಂಧಿಸಿದೆ. ಸತತ 11 ಗಂಟೆಗಳ ವಿಚಾರಣೆಯ ಬಳಿಕ ಬಂಧಿಸಲಾಗಿದ್ದು, ಪೊಲೀಸರು ಸೋಮವಾರ ಅವರನ್ನು ದೆಹಲಿ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

ದೆಹಲಿ ಈಶಾನ್ಯ ಭಾಗದಲ್ಲಿ ನಡೆದಿರುವ ಗಲಭೆ ಸಂಬಂಧ ಪೊಲೀಸ್‌ ಅಪರಾಧ ದಳ ಉಮರ್‌ ಖಾಲಿದ್‌ರನ್ನು ಸೆಪ್ಟೆಂಬರ್‌ 2ರಂದು ಕೆಲವು ಗಂಟೆಗಳು ವಿಚಾರಣೆಗೆ ಒಳಪಡಿಸಿತ್ತು. ಗಲಭೆ ಹಿಂದಿನ ಪಿತೂರಿ ಆರೋಪಗಳಲ್ಲಿಯೂ ದೆಹಲಿ ಪೊಲೀಸ್‌ ವಿಶೇಷ ಘಟಕ ಅವರನ್ನು ಪ್ರಶ್ನಿಸಿತ್ತು. ಗಲಭೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಈ ಹಿಂದೆ ಉಮರ್‌ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

ಪೊಲೀಸರು ಉಮರ್‌ ಅವರ ಮೊಬೈಲ್‌ ಫೋನ್‌ ಸಹ ವಶಕ್ಕೆ ಪಡೆದಿದ್ದಾರೆ. ಉಮರ್‌ ಬಂಧನದ ಕುರಿತು ಇಲ್ಯಾಸ್‌ ಟ್ವೀಟಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಗರು ಮತ್ತು ವಿರೋಧಿಸುವವರ ನಡುವೆ ಫೆಬ್ರುವರಿ 24ರಂದು ನಡೆದ ಘರ್ಷಣೆ ಹಿಂಸಾರೂಪ ಪಡೆಯಿತು. ಸುಮಾರು 72 ಗಂಟೆಗಳು ನಡೆದ ಗಲಭೆಯಿಂದಾಗಿ ಕನಿಷ್ಠ 53 ಮಂದಿ ಸಾವಿಗೀಡಾದರು ಹಾಗೂ ಸುಮಾರು 200 ಮಂದಿ ಗಾಯಗೊಂಡರು. ಗಲಭೆ ತಡೆಯುವ ಕಾರ್ಯಾಚರಣೆಯಲ್ಲಿದ್ದ ಪೊಲೀಸರ ಪೈಕಿ 108 ಮಂದಿ ಗಾಯಗೊಂಡರೆ, ಇಬ್ಬರು ಪೊಲೀಸರು ಸಾವಿಗೀಡಾದರು.

ಗಲಭೆಯಲ್ಲಿ ಭಾಗಿಯಾಗಿದ್ದ ಎಲ್ಲ ವ್ಯಕ್ತಿಗಳ ವೈಯಕ್ತಿ ಪಾತ್ರಗಳ ಕುರಿತು ತನಿಖೆ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ. ಇದೇ ವರ್ಷ ಫೆಬ್ರುವರಿಯಲ್ಲಿ ನಡೆದಿರುವ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಪೊಲೀಸರು 751 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

‘ಗಲಭೆಯಿಂದ ಖಾಸಗಿ ಮತ್ತು ಸರ್ಕಾರದ ಬಹಳಷ್ಟು ಆಸ್ತಿ–ಪಾಸ್ತಿಗೆ ಹಾನಿಯಾಗಿದೆ. ಪ್ರಕರಣದಲ್ಲಿ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಆರೋಪಪಟ್ಟಿ ಸಿದ್ಧಪಡಿಸಿ ಕೋರ್ಟ್‌ಗೆ ಹಾಜರು ಪಡಿಸಿರುವುದಾಗಿ’ ಪೊಲೀಸರು ಹೇಳಿದ್ದಾರೆ.

751 ಪ್ರಕರಣಗಳ ಪೈಕಿ ಪೊಲೀಸರು ಈವರೆಗೂ 1,575 ಜನರನ್ನು ಬಂಧಿಸಿದ್ದಾರೆ. ಅವರಲ್ಲಿ 1,153 ಮಂದಿ ವಿರುದ್ಧ 250 ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.