ನಾಗ್ಪುರದಲ್ಲಿ ಸೋಮವಾರ ನಡೆದ ಗಲಭೆ ನಿಯಂತ್ರಿಸಲು ಪೊಲೀಸರು ಶ್ರಮಿಸಿದರು
–ಪಿಟಿಐ ಚಿತ್ರ
ನಾಗ್ಪುರ: ಮೊಘಲ್ ದೊರೆ ಔರಂಗಜೇಬ್ ಸಮಾಧಿ ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳದ ಸದಸ್ಯರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ, ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ನಾಗ್ಪುರದ ಕೇಂದ್ರ ಭಾಗದಲ್ಲಿ ಹಿಂಸಾಚಾರ ನಡೆದಿದೆ.
ಈ ವೇಳೆ, ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಗಲಭೆಯಲ್ಲಿ ಡಿಸಿಪಿ ನಿಕೇತನ್ ಕದಂ ಸೇರಿದಂತೆ ಮೂವರು ಪೊಲೀಸರು ಹಾಗೂ ಆರು ನಾಗರಿಕರು ಗಾಯಗೊಂಡಿದ್ದು, ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಚಿಟ್ನಿಸ್ ಪಾರ್ಕ್ ಮತ್ತು ಮಹಲ್ ಪ್ರದೇಶಗಳಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ದಾಳಿ ನಡೆಸಿ, ಲಾಠಿ ಪ್ರಹಾರ ನಡೆಸಿದರು. ಕ್ರಮೇಣ ಹಿಂಸಾಚಾರವು ನಗರದ ಕೊಟ್ಟಾಲಿ, ಗಣೇಶಪೇಟೆ ಕಡೆಗೂ ವಿಸ್ತರಿಸಿತು. ಹಿಂಸಾಚಾರದ ವೇಳೆ ಗಲಭೆಕೋರರು ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಹಲವು ಮನೆಗಳ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಲ್ ಪ್ರದೇಶದ ಛತ್ರಪತಿ ಶಿವಾಜಿ ಪ್ರತಿಮೆ ಬಳಿ ಬಜರಂಗದಳ ಸದಸ್ಯರು ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಗಲಭೆ ಆರಂಭವಾಯಿತು. ಪ್ರತಿಭಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಕೂಡಲೇ, ಕುರಾನ್ ಅನ್ನು ಸುಡಲಾಗಿದೆ ಎಂಬ ವದಂತಿ ಹರಡಿತು. ಇದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಯಿತು.
ಕುರಾನ್ ಸುಟ್ಟಹಾಕಲಾಗಿದೆ ಎಂದು ಆರೋಪಿಸಿ ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಬಜರಂಗದಳದ ಪದಾಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಪ್ರತಿಭಟನೆ ವೇಳೆ ಔರಂಗಜೇಬ್‌ನ ಪ್ರತಿಕೃತಿಯನ್ನು ಮಾತ್ರ ಸುಟ್ಟುಹಾಕಿದ್ದಾಗಿ ಪ್ರತಿಕ್ರಿಯಿಸಿದ್ದಾರೆ.
ಗಲಭೆ, ಹಿಂಸಾಚಾರದ ಕಾರಣ ನಾಗ್ಪುರದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವದಂತಿಗಳನ್ನು ನಂಬಬೇಡಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.