ಮುತ್ಯಾಲಮ್ಮ ದೇವಸ್ಥಾನದ ವಿಗ್ರಹ ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
–ಪಿಟಿಐ ಚಿತ್ರ
ಹೈದರಾಬಾದ್: ದೇವರ ವಿಗ್ರಹ ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಶನಿವಾರ ಲಾಠಿ ಪ್ರಹಾರ ನಡೆಸಿದರು.
ಎಂಜಿನಿಯರಿಂಗ್ ಪದವೀಧರ, ಮಹಾರಾಷ್ಟ್ರದ ಸಲ್ಮಾನ್ ಸಲೀಂ ಠಾಕೂರ್ ಅಲಿಯಾಸ್ ಸಲ್ಮಾನ್ ಎನ್ನುವವನು ಸಿಕಂದರಾಬಾದ್‌ನ ಮುತ್ಯಾಲಮ್ಮ ದೇವಸ್ಥಾನದ ಪ್ರಮುಖ ವಿಗ್ರಹವನ್ನು ಅಪವಿತ್ರಗೊಳಿಸಿದ್ದ. ಇದನ್ನು ಖಂಡಿಸಿ ಸ್ಥಳೀಯರು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ದೇವಸ್ಥಾನಗಳ ವಿಚಾರದಲ್ಲಿ ತೆಲಂಗಾಣ ಸರ್ಕಾರ ತೋರುತ್ತಿರುವ ‘ಧೋರಣೆ’ಯನ್ನು ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ವಿಎಚ್‌ಪಿ ಶನಿವಾರ ಕರೆ ನೀಡಿತ್ತು. ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದೇವಸ್ಥಾನದ ಎದುರು ಜಮಾಯಿಸಿದ್ದರು. ಅವರು ಕೇಸರಿ ಧ್ವಜ ಹಿಡಿದಿದ್ದರು.
‘ಜೈ ಶ್ರೀರಾಮ್’, ‘ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಅವರು ಕೂಗಿದರು. ಪ್ರತಿಭಟನಕಾರರು ಪೊಲೀಸರತ್ತ ನೀರಿನ ಪೊಟ್ಟಣಗಳನ್ನು ಎಸೆದಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಲಾಠಿ ಪ್ರಹಾರದ ಕಾರಣದಿಂದಾಗಿ ಕೆಲವರಿಗೆ ಗಾಯಗಳಾಗಿವೆ.
ಲಾಠಿ ಪ್ರಹಾರವನ್ನು ಬಿಜೆಪಿಯು ಖಂಡಿಸುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.