ADVERTISEMENT

ಪೊಲೀಸ್‌ ಅಧಿಕಾರಿಗಳು ನೈತಿಕ ಪೊಲೀಸ್‌ಗಿರಿ ಮಾಡಬೇಕಿಲ್ಲ: ‘ಸುಪ್ರೀಂ’

ಪಿಟಿಐ
Published 18 ಡಿಸೆಂಬರ್ 2022, 15:38 IST
Last Updated 18 ಡಿಸೆಂಬರ್ 2022, 15:38 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಪೊಲೀಸ್‌ ಅಧಿಕಾರಿಗಳು ‘ನೈತಿಕ ಪೊಲೀಸ್‌ಗಿರಿ’ ನಡೆಸಬೇಕಿಲ್ಲ. ಅಲ್ಲದೇ, ಭೌತಿಕವಾಗಿ ಅಥವಾ ವಸ್ತುರೂಪದಲ್ಲಿ ನೆರವು ಕೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಸಿಐಎಸ್‌ಎಫ್‌ ಕಾನ್‌ಸ್ಟೆಬಲ್‌ ಸಂತೋಷಕುಮಾರ್‌ ಪಾಂಡೆ ಎಂಬಾತನನ್ನು ಸೇವೆಯಿಂದ ವಜಾಗೊಳಿಸಿ ಶಿಸ್ತು ಪ್ರಾಧಿಕಾರ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಜೆ.ಕೆ.ಮಾಹೇಶ್ವರಿ ಅವರಿದ್ದ ಪೀಠ, ‘ಸಿಐಎಸ್‌ಎಫ್‌ ಕಾನ್‌ಸ್ಟೆಬಲ್ ಸಂತೋಷಕುಮಾರ್‌ ಪಾಂಡೆಯನ್ನು, ಶೇ 50ರಷ್ಟು ಬಾಕಿ ವೇತನದೊಂದಿಗೆ ಪುನಃ ಸೇವೆಯಲ್ಲಿ ಮುಂದುವರಿಸಬೇಕು’ ಎಂಬುದಾಗಿ ಗುಜರಾತ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.

ADVERTISEMENT

‘ಈ ಪ್ರಕರಣದಲ್ಲಿ, ಹೈಕೋರ್ಟ್‌ ನೀಡಿರುವ ಕಾರಣಗಳು ದೋಷದಿಂದ ಕೂಡಿವೆ’ ಎಂದೂ ನ್ಯಾಯಪೀಠ ಹೇಳಿದೆ.

ಪ್ರಕರಣದ ವಿವರ: ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್‌) ಕಾನ್‌ಸ್ಟೆಬಲ್‌ ಆಗಿದ್ದ ಪಾಂಡೆ, ಗುಜರಾತ್‌ನ ವಡೋದರಾದ ಐಪಿಸಿಎಲ್‌ ಟೌನ್‌ಶಿಪ್‌ನಲ್ಲಿ ಕರ್ತವ್ಯದಲ್ಲಿದ್ದರು.

2001ರ ಅಕ್ಟೋಬರ್‌ 26ರ ತಡರಾತ್ರಿ, ರಾತ್ರಿ ಪಾಳಿಯಲ್ಲಿದ್ದರು. ಆಗ, ಮಹೇಶ್ ಬಿ.ಚೌಧರಿ ಎಂಬ ಯುವಕ ತನ್ನ ಗೆಳತಿಯೊಂದಿಗೆ ಬೈಕ್‌ನಲ್ಲಿ ಈ ಟೌನ್‌ಶಿಪ್‌ನಲ್ಲಿ ಹೊರಟಿದ್ದರು. ಪಾಂಡೆ ಅವರು ತಮ್ಮ ಬಳಿ ಬರುತ್ತಿದ್ದಂತೆಯೇ ಚೌಧರಿ ಬೈಕ್‌ ನಿಲ್ಲಿಸಿದ್ದರು.

‘ಯುವಕ–ಯುವತಿಯನ್ನು ಪ್ರಶ್ನಿಸಿದ್ದ ಪಾಂಡೆ, ಪರಿಸ್ಥಿತಿಯ ಲಾಭ ಪಡೆಯಲು ಮುಂದಾದರು. ನಿನ್ನ ಗೆಳತಿಯೊಂದಿಗೆ ಕೆಲ ಸಮಯ ಕಳೆಯುವುದಾಗಿ ಚೌಧರಿಗೆ ಹೇಳಿದ್ದರು. ಇದಕ್ಕೆ ಚೌಧರಿ ಪ್ರತಿಭಟನೆ ವ್ಯಕ್ತಪಡಿಸಿದ್ದರು’ ಎಂದು ದೋಷಾರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

‘ಕೊನೆಗೆ, ಬೇರೆ ಏನಾದರೂ ವಸ್ತುವನ್ನು ಕೊಡುವಂತೆ ಪಟ್ಟು ಹಿಡಿದಿದ್ದ ಪಾಂಡೆಗೆ, ಚೌಧರಿ ತನ್ನ ವಾಚನ್ನು ನೀಡಿದ್ದ’ ಎಂದೂ ವಿವರಿಸಲಾಗಿದೆ.

ನಂತರ, ಈ ಕುರಿತು ಚೌಧರಿ ದೂರು ನೀಡಿದ್ದರು. ತನಿಖೆ ನಡೆದು, ಪಾಂಡೆಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ‍ಪಾಂಡೆ, ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.