ಶ್ರೀನಗರ: ರಾಹುಲ್ ಭಟ್ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಮೆರವಣಿಗೆ ಹೊರಟಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಸದಸ್ಯರನ್ನು ತಡೆಯಲು ಪೊಲೀಸರು ಲಘು ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ.
ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಶೇಖ್ ಪೋರಾ ಪ್ರದೇಶದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಬಳಿಕ ಏರ್‌ಪೋರ್ಟ್ ಕಡೆ ತೆರಳಲು ಮುಂದಾಗಿದ್ದಾರೆ. ಈ ಸಂದರ್ಭ ಪೊಲೀಸರ ತಂಡ ಅವರನ್ನು ತಡೆದಿದೆ.
ಪೊಲೀಸರ ಮನವಿ ಬಳಿಕವೂ ಪ್ರತಿಭಟನಾಕಾರರು ಮೆರವಣಿಗೆ ನಿಲ್ಲಿಸಲು ನಿರಾಕರಿಸಿದರು. ಹೀಗಾಗಿ, ಲಾಠಿ ಪ್ರಹಾರ ನಡೆಸಿದ ಪೊಲೀಸರು, ಆಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮ್ಮ ಪ್ರಾಣವನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಶ್ಮೀರಿ ಪಂಡಿತ ಸಮುದಾಯವು ಗುರುವಾರದಿಂದ ಪ್ರತಿಭಟನೆ ನಡೆಸುತ್ತಿದೆ.
ಗುರುವಾರ ಬುಡ್ಗಾಮ್‌ನ ಚದೂರ ಪ್ರದೇಶದಲ್ಲಿ ಜನಜಂಗುಳಿಯಿಂದ ಕೂಡಿದ್ದ ಸರ್ಕಾರಿ ಕಚೇರಿಯಲ್ಲಿ 35 ವರ್ಷದ ನೌಕರ, ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರಿಗೆ ಗುಂಡಿಕ್ಕಿ ಭಯೋತ್ಪಾದಕರು ಹತ್ಯೆ ಮಾಡಿದ್ದರು.
ಈ ನಡುವೆ, ಮೃತ ರಾಹುಲ್ ಭಟ್ ಕುಟುಂಬಕ್ಕೆ ಸಾಂತ್ವನ ಹೇಳುವುದರಿಂದ ತಡೆಯಲು ನನಗೆ ಗೃಹಬಂಧನ ವಿಧಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಟ್ವೀಟ್ ಮೂಲಕ ದೂರಿದ್ದಾರೆ. ಕಾಶ್ಮೀರ ಪಂಡಿತರು ಮತ್ತು ಮುಸಲ್ಮಾನರು ಪರಸ್ಪರ ಸಾಂತ್ವನ ಹೇಳಲು ಬಿಜೆಪಿ ಬಿಡುತ್ತಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆಗೆ ಪೊಲೀಸರು ನಿರಾಕರಿಸಿದ್ದಾರೆ.
ಪ್ರತಿಭಟನಾಕಾರರ ವಿರುದ್ಧದ ಲಾಠಿ ಪ್ರಹಾರಕ್ಕೆ ಕಿಡಿಕಾರಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ, ನ್ಯಾಯಯುತ ಪ್ರತಿಭಟನೆ ಮೇಲೆ ಬಲಪ್ರಯೋಗ ನಾಚಿಕೆಗೇಡಿನ ಕೃತ್ಯ ಎಂದು ಟೀಕಿಸಿದ್ದಾರೆ.
‘ಯಾವುದೇ ಸಮಸ್ಯೆ ಎದುರಾದಾಗಲೂ ಸಹ ಕಾಶ್ಮೀರದ ಆಡಳಿತ ವರ್ಗವು ಜನರ ಮೇಲೆ ಬಲ ಪ್ರಯೋಗವನ್ನೇ ಮಾಡಿದೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಕಾಶ್ಮೀರಿ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದಾಗ ಪ್ರತಿಭಟಿಸುವ ಹಕ್ಕು ಜನರಿಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.