ADVERTISEMENT

ಆರ್‌ಟಿಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು: ಸಿಇಸಿ ಆದೇಶ ಆಧಾರವಾಗದು– ಕೇಂದ್ರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 16:02 IST
Last Updated 25 ಜುಲೈ 2023, 16:02 IST
‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’
‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’   

ನವದೆಹಲಿ: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ತರುವಂತೆ ನಿರ್ದೇಶನ ಕೋರಲು ಮಾಹಿತಿ ಹಕ್ಕು ಆಯೋಗದ ಆದೇಶ ಆಧಾರವಾಗಲಾರದು‘ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲ, ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಬಗ್ಗೆ ಪ್ರಮಾಣ‍ಪತ್ರ ಸಲ್ಲಿಸಿದರು.

‘ನಿರ್ದಿಷ್ಟ ಅಭ್ಯರ್ಥಿಯ ಆಯ್ಕೆ ಸೇರಿದಂತೆ ಆಂತರಿಕ ವಿಷಯಗಳನ್ನೂ ಆರ್‌ಟಿಐ ಅಡಿ ಕೋರಬಹುದು ಎಂಬ ರಾಜಕೀಯ ಪಕ್ಷಗಳ ವಾದದಲ್ಲಿ ತರ್ಕವಿದೆ’ ಎಂದು ಸುಪ್ರೀಂ ಕೋರ್ಟ್‌ನ ಪೀಠವು ಇದೇ ವೇಳೆ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ADVERTISEMENT

ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳನ್ನು ‘ಸಾರ್ವಜನಿಕ ಸಂಸ್ಥೆ’ಗಳೆಂದು ಘೋಷಿಸಿ ಆರ್‌ಟಿಐ ಕಾಯ್ದೆಯಡಿ ತರಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ಕೈಗೊಂಡಿತು. ಬಿಜೆಪಿ, ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಅಸೋಸಿಯೇಷನ್‌ ಫಾರ್ ಡೆಮಾಕ್ರಾಟಿಕ್‌ ರಿಫಾರ್ಮ್ಸ್‌ ಸಂಸ್ಥೆಯನ್ನು ಪ್ರತಿನಿಧಿಸಿದ್ದ ವಕೀಲ ಪ್ರಶಾಂತ್ ಭೂಷಣ್ ಅವರು, ಮಾಹಿತಿ ಹಕ್ಕು ಆಯೋಗವು (ಸಿಐಸಿ) 2013ರಲ್ಲಿ ಆದೇಶ ನೀಡಿದ್ದು, ಸರ್ಕಾರದಿಂದ ತೆರಿಗೆ ವಿನಾಯಿತಿ ಮತ್ತು ಭೂಮಿಯನ್ನು ಪಡೆಯುವ ರಾಜಕೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂದು ತಿಳಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿದರು.

‌ಸಿಪಿಎಂ ‍ಪರ ವಕೀಲ ಪಿ.ವಿ.ದಿನೇಶ್‌, ‘ನಮ್ಮ ಕಕ್ಷಿದಾರರಿಗೆ ಆರ್ಥಿಕ ಪಾರದರ್ಶಕತೆ ಮುಖ್ಯ. ಆರ್‌ಟಿಐ ಅಡಿ ತರಲು ತಕರಾರಿಲ್ಲ. ಆದರೆ, ಇದೇ ಅಭ್ಯರ್ಥಿ ಏಕೆ ಆಯ್ಕೆ ಮಾಡಲಾಯಿತು ಎಂಬುದು ಸೇರಿದಂತೆ ಆಂತರಿಕ ವಿಷಯಗಳನ್ನು ಕೇಳಬಾರದು‘ ಎಂದರು.

‘ಮುಖ್ಯವಾಗಿ ರಾಜಕೀಯ ಪಕ್ಷಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಯುವ ಉದ್ದೇಶ ಇರುತ್ತದೆ’ ಎಂದು ತುಷಾರ್ ಮೆಹ್ತಾ ಇದಕ್ಕೆ ದನಿಗೂಡಿಸಿದರು.

‘ನಿಮ್ಮ ವಾದದಲ್ಲಿ ತರ್ಕವಿದೆ. ಹೇಗೆ ಅಭ್ಯರ್ಥಿ ಆಯ್ಕೆ ಮಾಡುತ್ತೀರಿ ಎಂದು ಕೇಳಲಾಗದು’ ಎಂದು ಪೀಠ ಅಭಿಪ್ರಾಯಪಟ್ಟಿತು. ಬಳಿಕ ‍ಪೀಠವು ಅರ್ಜಿಗಳ ಮುಂದಿನ ವಿಚಾರಣೆಯನ್ನು ಆಗಸ್ಟ್ 1ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.