ADVERTISEMENT

ಕಾಲೇಜಿನಲ್ಲಿ ರಾಹುಲ್‌ ಸಂವಾದ: ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ– ಚುನಾವಣಾ ಆಯೋಗ

ಏಜೆನ್ಸೀಸ್
Published 21 ಮಾರ್ಚ್ 2019, 12:26 IST
Last Updated 21 ಮಾರ್ಚ್ 2019, 12:26 IST
   

ಚೆನ್ನೈ:ಇಲ್ಲಿನ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ನಡೆಸಿದ್ದ ಸಂವಾದದಿಂದ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ.

ಮಾರ್ಚ್‌ 13ರಂದು ಸ್ಟೆಲ್ಲಾ ಮಾರಿಸ್‌ ಮಹಿಳಾ ಕಾಲೇಜಿನಲ್ಲಿ ಸಂವಾದ ನಡೆಸಲು ಅನುಮತಿ ಪಡೆಯಲಾಗಿತ್ತು. ಅಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಸ್ಥಳೀಯ ಚುನಾವಣಾ ಅಧಿಕಾರಿಗಳು ವರದಿ ನೀಡಿರುವುದಾಗಿ ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ ಸತ್ಯಬ್ರತಾ ಸಾಹೋ ತಿಳಿಸಿದ್ದಾರೆ. ರಾಹುಲ್‌ ಗಾಂಧಿ ಮಾಡಿರುವ ಭಾಷಣದ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ.

ರಾಹುಲ್‌ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾಡಿರುವ ಭಾಷಣದ ವಿಷಯದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿಗೆ ಮುಖ್ಯ ಚುನಾವಣಾ ಅಧಿಕಾರಿ ಸೂಚಿಸಿದ್ದಾರೆ.

ADVERTISEMENT

ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಹುಲ್‌ ಗಾಂಧಿ ಅವರೊಂದಿಗೆ ಸಂವಾದಕ್ಕೆ ಕಾಲೇಜು ಅನುಮತಿ ನೀಡಿದ್ದರ ಕುರಿತು ವಿಚಾರಣೆ ನಡೆಸುವಂತೆ ತಮಿಳುನಾಡು ಸರ್ಕಾರ ಆದೇಶಿಸಿತ್ತು. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಆರ್‌.ಸರುಮತಿ ಈ ಸಂಬಂಧ ವಿಚಾರಣೆ ನಡೆಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಸಂವಾದದಲ್ಲಿ ರಾಹುಲ್‌ ಗಾಂಧಿ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದ್ದರು ಹಾಗೂ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು. ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಕುರಿತೂ ರಾಹುಲ್‌ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.