ADVERTISEMENT

ವಸತಿ ಪ್ರದೇಶದಲ್ಲಿ ಮಾಲಿನ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 18:35 IST
Last Updated 24 ಅಕ್ಟೋಬರ್ 2020, 18:35 IST

ನವದೆಹಲಿ: ವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳ ಮಾಲಿನ್ಯಕ್ಕೆ ಅವಕಾಶ ನೀಡಲಾಗದು. ಸ್ವಚ್ಛ ಪರಿಸರವನ್ನು ಹೊಂದುವ ನಿವಾಸಿಗಳ ಹಕ್ಕನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹಸಿರು ಪೀಠವು ಹೇಳಿದೆ.

ಹರಿಯಾಣದ ಕೈಗಾರಿಕಾ ಘಟಕ ಎಸ್‌ಎಸ್‌ಎಫ್‌ ಪಾಲಿಮರ್ಸ್‌ ಅನ್ನು ಮಾಲಿನ್ಯದ ಕಾರಣಕ್ಕೆ ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೈಗಾರಿಕಾ ಘಟಕವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಸಿರು ಪೀಠದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ನಡೆಸಿದರು. ಕೈಗಾರಿಕಾ ಘಟಕವು ಒಪ್ಪಿತ ಷರತ್ತುಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿತ್ತು ಮತ್ತು ವಾಯು ಗುಣಮಟ್ಟವು ನಿಗದಿತ ಮಾನದಂಡಕ್ಕಿಂತ ಕಡಿಮೆ ಇತ್ತು ಎಂದು ಪರಿಣತ ಸಮಿತಿ ಹೇಳಿದೆ ಎಂದು ಪೀಠವು ತಿಳಿಸಿತು.

ಕೈಗಾರಿಕಾ ಘಟಕ ಆರಂಭಿಸಿ ಹತ್ತು ವರ್ಷ ಕಾರ್ಯಾಚರಣೆ ನಡೆಸಲು 2008ರ ಜುಲೈ 30ರಂದು ಅನುಮತಿ ನೀಡಲಾಗಿತ್ತು. ಆದರೆ, ಘಟಕವು ಕಾರ್ಯಾಚರಣೆ ಆರಂಭಿಸಿದ್ದು 2012ರಲ್ಲಿ. ಹಾಗಾಗಿ, 10 ವರ್ಷ ಕಾರ್ಯಾಚರಣೆ ಪೂರೈಸಲು ಅನುಮತಿ ನೀಡಬೇಕು ಎಂದು ಎಸ್‌ಎಸ್‌ಎಫ್‌ ಪಾಲಿಮರ್ಸ್‌ ಕೋರಿತ್ತು. ಈ ವಾದವನ್ನು ಕೂಡ ಹಸಿರು ಪೀಠವು ತಿರಸ್ಕರಿಸಿದೆ.

ADVERTISEMENT

‘10 ವರ್ಷಕ್ಕೆ ನೀಡಿದ ಅನುಮತಿಯು ಷರತ್ತುರಹಿತವೇನೂ ಅಲ್ಲ. ನಿವಾಸಿಗಳ ಸ್ವಚ್ಛ ವಾತಾವರಣದ ಹಕ್ಕನ್ನು ಕಸಿದುಕೊಳ್ಳಲಾಗದು. ಅನುಮತಿ ನೀಡಿದಂತೆ ಹತ್ತು ವರ್ಷದ ಕಾರ್ಯಾಚರಣೆ ಪೂರ್ಣಗೊಂಡಿಲ್ಲ ಎಂಬುದನ್ನು ಒಪ್ಪಿಕೊಂಡರೂ, ಕಾರ್ಖಾನೆ ತೆರೆಯಲು ಅವಕಾಶ ನೀಡಲಾಗದು’ ಎಂದು ಪೀಠವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.