ADVERTISEMENT

ಉತ್ತರಪ್ರದೇಶ: ವಿದ್ಯುತ್‌ ಸ್ಥಾವರದ ಕಸದಲ್ಲಿ ಯೋಗಿ, ಮೋದಿ ಭಾವಚಿತ್ರಗಳು ಪತ್ತೆ

ಪಿಟಿಐ
Published 24 ಜುಲೈ 2022, 10:59 IST
Last Updated 24 ಜುಲೈ 2022, 10:59 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಮಥುರಾ, ಉತ್ತರ ಪ್ರದೇಶ (ಪಿಟಿಐ): ಕೋಸಿ ಕಾಲನ್‌ ವಿದ್ಯುತ್‌ ಸ್ಥಾವರದ ಕಸದಲ್ಲಿ ಪ್ರಧಾನಿ ನರೇದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಭಾವಚಿತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಚೇರಿಯನ್ನು ಸ್ವಚ್ಛಗೊಳಿಸುವ ವೇಳೆ ವಿದ್ಯುತ್‌ ಸ್ಥಾವರದ ಉದ್ಯೋಗಿಗಳು ಈ ಭಾವಚಿತ್ರಗಳನ್ನು ಕಸದರಾಶಿಯಲ್ಲಿ ಎಸೆದಿರಬಹುದು ಎಂದೂ ಅವರು ಹೇಳಿದರು

ಸದ್ಯ ವಿದ್ಯುತ್‌ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಭಾಕರ್‌ ಪಾಂಡೆ ಅವರುಕಸದ ರಾಶಿಯಿಂದ ಭಾವಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಭಾವಚಿತ್ರಗಳನ್ನು ಕಸದ ರಾಶಿಯಲ್ಲಿ ಎಸೆದಿರುವ ಬಗ್ಗೆ ಬಿಜೆಪಿಯ ಯುವ ಮೋರ್ಚಾವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಇಂಧನ ಸಚಿವ ಎ.ಕೆ. ಶರ್ಮಾ ಅವರಿಗೆ ದೂರು ನೀಡಿದ ಬಳಿಕ, ಘಟನೆಯ ಕುರಿತು ವರದಿ ಸಲ್ಲಿಸುವಂತೆ ಪಾಂಡೆ ಅವರಿಗೆ ಅಲ್ಲಿನ ಸರ್ಕಾರ ಆದೇಶಿಸಿದೆ.

‘ವಿದ್ಯುತ್‌ ಸ್ಥಾವರದಲ್ಲಿ ತಪಾಸಣೆ ನಡೆಸಿದ ಬಳಿಕ, ಯುವ ಮೋರ್ಚಾ ನೀಡಿರುವ ದೂರು ಸತ್ಯವೆಂದು ಪತ್ತೆಯಾಗಿದೆ. ಉಪ ವಿಭಾಗೀಯ ಎಂಜಿನಿಯರ್‌ ಹಾಗೂ ಜೂನಿಯರ್‌ ಎಂಜಿನಿಯರ್‌ ಕಚೇರಿಯನ್ನು ಸ್ವಚ್ಛಗೊಳಿಸಿದ ಬಳಿಕ ಚಿತ್ರಗಳನ್ನು ಕಸದಲ್ಲಿಟ್ಟಿದ್ದಾರೆ. ಈ ಭಾವಚಿತ್ರಗಳನ್ನು ಸ್ವಚ್ಛಗೊಳಿಸಿ ಕಚೇರಿಯಲ್ಲಿ ಮತ್ತೆ ಇಡಲಾಗುವುದು. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ’ ಎಂದು ಪಾಂಡೆ ಹೇಳಿದರು.

ಕೆಲವು ದಿನಗಳ ಹಿಂದೆ,ಪೌರ ಕಾರ್ಮಿಕನೊಬ್ಬ ಮೋದಿ ಹಾಗೂ ಆದಿತ್ಯನಾಥ್‌ ಅವರ ಭಾವಚಿತ್ರಗಳನ್ನು ತನ್ನ ಕಸದ ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಬಳಿಕ ಆತ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲನ್ನು ತೋಡಿಕೊಂಡ ಬಳಿಕ ಆತನನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.