ADVERTISEMENT

ಇಥಿಯೋಪಿಯಾ: ’ಬೋಯಿಂಗ್‌ 737 ಮ್ಯಾಕ್ಸ್‌’ ವಿಮಾನಗಳೆಂದರೆ ಎಲ್ಲೆಡೆ ತಲ್ಲಣ!

ಏಜೆನ್ಸೀಸ್
Published 11 ಮಾರ್ಚ್ 2019, 7:16 IST
Last Updated 11 ಮಾರ್ಚ್ 2019, 7:16 IST
   

ನವದೆಹಲಿ: ಇಥಿಯೋಪಿಯಾದಲ್ಲಿ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನ ಪತನಗೊಂಡು 157 ಜನರು ಮೃತಪಟ್ಟ ಪರಿಣಾಮ ಹಲವು ರಾಷ್ಟ್ರಗಳು ಬೋಯಿಂಗ್‌ ವಿಮಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡುತ್ತಿವೆ. ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬೋಯಿಂಗ್‌, ಜೆಟ್‌ಏರ್‌ವೇಸ್‌ ಹಾಗೂ ಸ್ಪೈಸ್‌ಜೆಟ್‌ ಸಂಸ್ಥೆಗಳಿಂದ ಮಾಹಿತಿ ಕೇಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ನಾಲ್ವರು ಸೇರಿ ಹಲವು ರಾಷ್ಟ್ರಗಳ 149 ಪ್ರಯಾಣಿಕರು ಹಾಗೂ ಎಂಟು ಮಂದಿ ವಿಮಾನ ಸಂಸ್ಥೆ ಸಿಬ್ಬಂದಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇಥಿಯೋಪಿಯಾ ಏರ್‌ಲೈನ್ಸ್‌ನ ಬೋಯಿಂಗ್‌ 737 ಆಡಿಸ್‌ ಅಬಬಾದಿಂದ ಕೀನ್ಯಾದ ನೈರೋಬಿಯಾಗೆ ಪ್ರಯಾಣ ಆರಂಭಿಸಿದ ಕೆಲ ಸಮಯದಲ್ಲಿಯೇ ಪತಗೊಂಡಿತು.

ದೇಶದ ವಿಮಾನಯಾನ ಸಂಸ್ಥೆಗಳಾದ ಜೆಟ್‌ಏರ್‌ವೇಸ್‌ ಹಾಗೂ ಸ್ಪೈಸ್‌ಜೆಟ್‌ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳನ್ನು ಬಳಸುತ್ತಿದ್ದು, ಪ್ರಯಾಣಿಕರ ಸುರಕ್ಷತೆಯ ಕಾರಣಗಳಿಂದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸಂಸ್ಥೆಗಳಿಂದ ಮಾಹಿತಿ ಪಡೆಯಲಿದೆ. ಈ ಕುರಿತು ವಿಮಾನ ನಿರ್ಮಾಣ ಸಂಸ್ಥೆ ಬೋಯಿಂಗ್‌ನ್ನೂ ಸಂಪರ್ಕಿಸಲಾಗುತ್ತದೆ ಎನ್ನಲಾಗಿದೆ.

ADVERTISEMENT

ಇಥೋಪಿಯನ್‌ ಏರ್‌ಲೈನ್ಸ್‌ ’ಬೋಯಿಂಗ್‌ 737 ಮ್ಯಾಕ್ಸ್‌ 8’ ವಿಮಾನಗಳ ಹಾರಾಟವನ್ನು ಸ್ಥಗಿತ ಪಡಿಸಿರುವುದಾಗಿ ಸೋಮವಾರ ಹೇಳಿದೆ. ವಿಮಾನ ಪತನ ಸಂಭವಿಸಿದ ನಂತರದಲ್ಲಿ ಏರ್‌ಲೈನ್ಸ್‌ ಬಿ–737–8 ಮ್ಯಾಕ್ಸ್‌ ವಿಮಾನಗಳ ಹಾರಾಟ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದು, ಮುಂದಿನ ಸೂಚನೆಯ ವರೆಗೂ ಆ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದಿದೆ.

ಚೀನಾ ಸರ್ಕಾರ ದೇಶದ ವಿಮಾನಯಾನ ಸಂಸ್ಥೆಗಳಿಗೆಬಿ–737–8 ಮ್ಯಾಕ್ಸ್‌ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಯ ಬಿ–737 ಮ್ಯಾಕ್ಸ್‌ ವಿಮಾನವು ಪತನಗೊಂಡಿತ್ತು. ಜಕಾರ್ತಾದಿಂದ ಹೊರಟಿದ್ದ ವಿಮಾನವು ಪತನಗೊಂಡು‍‍ಪ್ರಯಾಣಿಸುತ್ತಿದ್ದ ಎಲ್ಲ 189 ಜನರೂ ಸಾವಿಗೀಡಾದರು.

ಈವರೆಗೆ ಬೋಯಿಂಗ್‌ ಸಂಸ್ಥೆ 350ಕ್ಕೂ ಹೆಚ್ಚು ಬಿ–737 ಮ್ಯಾಕ್ಸ್‌ ವಿಮಾನಗಳನ್ನು ಹಲವು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಜಗತ್ತಿನಾದ್ಯಂತ 2017ರಿಂದ ಇದೇ ಮಾದರಿಯ ಸುಮಾರು 5000 ವಿಮಾನಗಳಿಗಾಗಿ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.