
ನವದೆಹಲಿ: ವಿದ್ಯುತ್ (ತಿದ್ದುಪಡಿ) ಮಸೂದೆಯ ಕರಡಿನ ಪ್ರಸ್ತಾವ 2025ಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಅವರು ಸಂಸತ್ ಸದಸ್ಯರ ಸಮಿತಿಯೊಂದಿಗೆ ಸಭೆ ನಡೆಸಿದ್ದಾರೆ ಎಂದು ವಿದ್ಯುತ್ ಸಚಿವಾಲಯ ಶನಿವಾರ ತಿಳಿಸಿದೆ.
ವಿವಿಧ ಪಕ್ಷಗಳಿಗೆ ಸೇರಿದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಿದ್ದುಪಡಿ ಮಸೂದೆಯಲ್ಲಿರುವ ವಿವಿಧ ಪ್ರಸ್ತಾವಗಳ ಕುರಿತು ಸದಸ್ಯರೊಂದಿಗೆ ಸಮಾಲೋಚಿಸಲು ಸಚಿವರು ಈ ಸಭೆಯನ್ನು ಕರೆದಿದ್ದರು.
ಈ ತಿದ್ದುಪಡಿ ಮಸೂದೆಯು ದೇಶದ ವಿದ್ಯುತ್ ವಲಯವನ್ನು ಸದೃಢಗೊಳಿಸುವ ಉದ್ದೇಶ ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯ ಸರ್ಕಾರಗಳು ಗೃಹ, ಕೃಷಿ ಗ್ರಾಹಕರಂತಹ ಗುಂಪುಗಳಿಗೆ ಸಬ್ಸಿಡಿಗಳನ್ನು ನೀಡುವುದನ್ನು ಮುಂದುವರಿಸಬಹುದು. ಈ ಗ್ರಾಹಕರಿಗೆ ವೆಚ್ಚದಲ್ಲಿ ಯಾವುದೇ ಹೆಚ್ಚಳವಾಗದಿರಬಹುದು. ಮಸೂದೆಯು ದೇಶದ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹ ಪ್ರಯತ್ನಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದೆ.
ಪ್ರಸ್ತಾವಿತ ಈ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟವು (ಎಐಪಿಇಎಫ್) ಡಿಸೆಂಬರ್ 23ರಂದು ದೇಶ ವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಕಾರ್ಮಿಕ ಒಕ್ಕೂಟಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.