ADVERTISEMENT

ಪ್ರಜಾ ಮತ: ಚುನಾವಣಾ ಪ್ರಚಾರದಲ್ಲಿ ಹಗೆತನದ ಮಾತು

ಉತ್ತರ ಪ್ರದೇಶ: ಬಿಜೆಪಿ ನಾಯಕರಿಂದ ಲುಂಗಿ, ಘೋರಿ–ಘಜನಿ, ಜಿನ್ನಾ ಪದಗಳ ಬಳಕೆ

ಸಂಜಯ ಪಾಂಡೆ
Published 5 ಡಿಸೆಂಬರ್ 2021, 19:45 IST
Last Updated 5 ಡಿಸೆಂಬರ್ 2021, 19:45 IST
ಸಂಸದ ಭಗವಂತ್ ಮಾನ್‌
ಸಂಸದ ಭಗವಂತ್ ಮಾನ್‌   

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಪ್ರಚಾರ ಆರಂಭವಾಗಿದ್ದು, ಬಿಜೆಪಿ ನಾಯಕರು ಹೊಸ ಹೊಸ ಪದಗಳನ್ನು ಅದರಲ್ಲೂ ವಿಶೇಷವಾಗಿ ಮುಸ್ಲಿಮರಿಗೆ ಸಂಬಂಧಿಸಿದ ಪದಗಳನ್ನು ಪ್ರಯೋಗಿಸುತ್ತಿದ್ದಾರೆ.

ಬಿಜೆಪಿ ಮುಖಂಡರು ನಡೆಸುತ್ತಿ ರುವ ಚುನಾವಣಾ ರ್‍ಯಾಲಿಗಳಲ್ಲಿ, ‘ಮತಾಂತರ, ಗೋ ಹತ್ಯೆ, ಹಿಂದೂ ಕುಟುಂಬಗಳ ವಲಸೆ’ ವಿಷಯಗಳನ್ನೂ ಕೆದಕುತ್ತಿದ್ದಾರೆ. ಹಿಂದೂಗಳಿಗೆ ಆಗಿದೆ ಎಂದು ಆರೋಪಿಸಲಾದ ‘ಅವಮಾನ’ ಹಾಗೂ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಇತರರ ಅಧಿಕಾರಾವಧಿಯಲ್ಲಿ ಹಿಂದೂಗಳ ಸಂಸ್ಕೃತಿ ಮೇಲಾಗಿದೆ ಎನ್ನಲಾದ ದಾಳಿ ಎಲ್ಲವನ್ನೂ ನೆನಪು ಮಾಡಿಕೊಡುತ್ತಿದ್ದಾರೆ.

‘ಇದು, ಧಾರ್ಮಿಕ ಧ್ರುವೀಕರಣ ಹಾಗೂ ಬಿಜೆಪಿಯು ತನ್ನನ್ನು ತಾನು ಹಿಂದೂಗಳ ಉದ್ಧಾರಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ADVERTISEMENT

ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು, ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿಗೆ ಸಿದ್ಧವಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ‘ಈ ಹಿಂದೆ, ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ‘ಲುಂಗಿಟೋಪಿ’ (ಮುಸ್ಲಿಮರಿಗೆ ಅನ್ವಯಿಸಿ) ಗೂಂಡಾಗಳು, ಆಯುಧ ಗಳನ್ನು ಹಿಡಿದು–ಬೆದರಿಸಿ ನಿಮ್ಮ ನೆಲವನ್ನು ಕಬಳಿಸಿದ್ದಾರೆ. ಇದಾವುದನ್ನೂ ನೀವು ಮರೆಯಬಾರದು’ ಎಂದು ಹೇಳಿದ್ದಾರೆ.ಇನ್ನು ಮುಂದೆ ತಾವು ಸಮಾಜವಾದಿ ಪಕ್ಷದ ಅಧ್ಯಕ್ಷರನ್ನು ‘ಅಖಿಲೇಶ್ ಅಲಿ ಜಿನ್ನಾ’ ಎಂದು ಕರೆಯುವುದಾಗಿಯೂ ಮೌರ್ಯ ಹೇಳಿದ್ದಾರೆ.

ಬಿಜೆಪಿ ಮುಖಂಡರ ಈ ಹೇಳಿಕೆಗಳಿಗೆ ಪ್ರತಿ‌ಕ್ರಿಯಿಸಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅನುರಾಗ್‌ ಭಾದುರಿಯಾ, ‘ಈ ಹೇಳಿಕೆಗಳು, ಬರಲಿರುವ ಚುನಾವಣೆಯಲ್ಲಿ ಸೋಲು ಖಚಿತ ಎಂಬುದನ್ನು ಬಿಜೆಪಿ ಒಪ್ಪಿಕೊಂಡಿದೆ ಎಂಬುದನ್ನು ಸಾಬೀತುಪಡಿಸುತ್ತವೆ’ ಎಂದಿದ್ದಾರೆ.

‘ಬಿಜೆಪಿ ಸೇರಲು ಆಮಿಷ’

ಚಂಡೀಗಡ (ಪಿಟಿಐ): ಬಿಜೆಪಿ ಸೇರುವಂತೆ, ಆ ಪಕ್ಷದ ಹಿರಿಯ ನಾಯಕ ರೊಬ್ಬರು ತಮಗೆ ಹಣ ಹಾಗೂ ಕೇಂದ್ರ ಸಚಿವ ಸ್ಥಾನದ ಆಮಿಷ ಒಡ್ಡಿದ್ದಾಗಿ ಆಮ್‌ ಆದ್ಮಿ ಪಕ್ಷದ ಪಂಜಾಬ್‌ ಘಟಕದ ಅಧ್ಯಕ್ಷ, ಸಂಸದ ಭಗವಂತ್ ಮಾನ್‌ ಆರೋಪಿಸಿದ್ದಾರೆ.

ಸಮಯ ಬಂದಾಗ ಆ ನಾಯಕರ ಹೆಸರನ್ನು ಬಹಿರಂಗಪಡಿಸುವುದಾಗಿ ಹೇಳಿರುವ ಮಾನ್, ತಮ್ಮನ್ನು ಹಣ ಅಥವಾ ಬೇರಾವುದರಿಂದಲೂ ಕೊಂಡುಕೊಳ್ಳಲಾಗದು ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದರು.

ಬಿಜೆಪಿಯ ಹಿರಿಯ ನಾಯಕರೊಬ್ಬರು ನಾಲ್ಕು ದಿನಗಳ ಹಿಂದೆ ತಮ್ಮನ್ನು ಸಂಪರ್ಕಿಸಿ, ‘ಮಾನ್‌ ಸಾಹೇಬ್‌, ಬಿಜೆಪಿ ಸೇರಲು ನೀವು ಏನು ತೆಗೆದುಕೊಳ್ಳುತ್ತೀರಿ? ನಿಮಗೆ ಹಣವೇನಾದರೂ ಬೇಕೇ’ ಎಂದು ಕೇಳಿದ್ದಾಗಿ ಮಾನ್‌ ಆರೋಪಿಸಿದರು. ‘ಬಿಜೆಪಿ ಸೇರ್ಪಡೆಯಾದಲ್ಲಿ, ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿಯೂ ಬಿಜೆಪಿಯ ಆ ನಾಯಕರು ಆಮಿಷ ಒಡ್ಡಿದರು’ ಎಂದು ಮಾನ್‌ ಹೇಳಿದ್ದಾರೆ.

ವಾರಾಣಸಿಗೆ ಮಮತಾ

ಲಖನೌ (ಪಿಟಿಐ): ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ) ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಅದರ ಮಧ್ಯೆಯೇ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಾರಾಣಸಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

‘ಅಖಿಲೇಶ್‌ ಬಯಸಿದರೆ ನಾವು ಎಸ್‌ಪಿಗೆ ಬೆಂಬಲ ನೀಡಲು ತಯಾರಿದ್ದೇವೆ ಎಂದು ಮಮತಾ ದೆಹಲಿಯಲ್ಲಿ ಈಗಾಗಲೇ ಹೇಳಿದ್ದಾರೆ. ಪಶ್ವಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಎಸ್‌ಪಿ ನಾಯಕಿ ಜಯಾ ಬಚ್ಚನ್‌ ಪಶ್ಚಿಮ ಬಂಗಾಳಕ್ಕೆ ಬಂದು ಟಿಎಂಸಿ ಪರ ಮತ ಯಾಚಿಸಿದ್ದರು. ಅದೇ ಮಾದರಿಯಲ್ಲಿ ನಾವು ಎಸ್‌ಪಿಗೆ ಸಹಕಾರ ನೀಡುತ್ತೇವೆ. ಜನವರಿ ಎರಡನೇ ವಾರದಲ್ಲಿ ಮಮತಾ ವಾರಾಣಸಿಗೆ ಭೇಟಿ ನೀಡುವ ಸಾಧ್ಯತೆ ಇದೆ’ ಎಂದು ಟಿಎಂಸಿ ಮುಖಂಡ ಲಲಿತೇಶ್‌ಪತಿ ತ್ರಿಪಾಠಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.