ADVERTISEMENT

ದೆಹಲಿ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವುದಷ್ಟೇ ಪ್ರಮುಖ ಕಾರಣವಲ್ಲ: ಜಾವಡೇಕರ್

ಮಾಲಿನ್ಯ ಸೃಷ್ಟಿಸುವ ಪ್ರಮುಖ ತಾಣಗಳ ಪರಿವೀಕ್ಷಣೆಗೆ 50 ಸಿಪಿಸಿಬಿ ತಂಡಗಳ ರಚನೆ

ಪಿಟಿಐ
Published 15 ಅಕ್ಟೋಬರ್ 2020, 9:12 IST
Last Updated 15 ಅಕ್ಟೋಬರ್ 2020, 9:12 IST
ಪ್ರಕಾಶ್ ಜಾವಡೇಕರ್‌
ಪ್ರಕಾಶ್ ಜಾವಡೇಕರ್‌   

ನವದೆಹಲಿ: ಚಳಿಗಾಲದಲ್ಲಿ ಮಾಲಿನ್ಯ ಉಂಟುಮಾಡುವಂತಹ ದೆಹಲಿ–ಎನ್‌ಸಿಆರ್ ಪ್ರದೇಶದ ಪ್ರಮುಖ ಸ್ಥಳಗಳ ಮೇಲೆ ನಿಗಾ ಇಡಲು ರಚಿಸಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ50 ಪರಿವೀಕ್ಷಣಾ ತಂಡಗಳ ಕ್ಷೇತ್ರ ಕಾರ್ಯಾಚರಣೆಗೆಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿ – ಎನ್‌ಸಿಆರ್‌ ಭಾಗದಲ್ಲಿ ಉಂಟಾಗುವ ವಾಯು ಮಾಲಿನ್ಯಕ್ಕೆ ಭತ್ತ, ಗೋಧಿಯಂತಹ ಬೆಳೆಗಳ ತ್ಯಾಜ್ಯವನ್ನು ಸುಡುವುದು ಪ್ರಮುಖ ಕಾರಣವಲ್ಲ. ಇದರ ಜತೆಗೆ ಹಲವು ಕಾರಣಗಳಿವೆ’ ಎಂದು ಜಾವಡೇಕರ್‌ ಸ್ಪಷ್ಟಪಡಿಸಿದರು.

‘ಬೆಳೆಯ ತ್ಯಾಜ್ಯ ಸುಡುವುದರಿಂದ ಶೇ 4ರಷ್ಟು ಮಾತ್ರ ವಾಯುಮಾಲಿನ್ಯ ಉಂಟಾಗುತ್ತಿದೆ. ಉಳಿದ ಶೇ 96ರಷ್ಟು ಮಾಲಿನ್ಯ ಸ್ಥಳೀಯ ಕಾರ್ಖಾನೆಗಳು ಸುಡುವ ಬಯೋಮಾಸ್‌(ಜೀವರಾಶಿ), ಕಸ ಸುರಿಯುವುದು, ರಸ್ತೆಗಳ ನಿರ್ಮಾಣ, ದೂಳು, ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುತ್ತಿದೆ’ ಎಂದರು.

ADVERTISEMENT

ಇತ್ತೀಚೆಗೆ ಪಂಜಾಬ್‌ನ ಲೂಧಿಯಾನಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಬೆಳೆ ತ್ಯಾಜ್ಯ ಸುಡುತ್ತಿದ್ದ ಹೊಗೆಯಿಂದ ನನ್ನ ಗಂಟಲು ಕಟ್ಟಿ, ಉಸಿರುಗಟ್ಟಿದ್ದೆ ಎಂದು ಜಾವಡೇಕರ್ ನೆನಪಿಸಿಕೊಂಡರು. ’ಪಂಜಾಬ್ ಸರ್ಕಾರ ಈ ಬೆಳೆಯ ತ್ಯಾಜ್ಯವನ್ನು ಸುಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಹೇಳಿದರು.

ಇದಕ್ಕೂ ಮುನ್ನ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡಗಳ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ’ಮಾಲಿನ್ಯ ಉಂಟುಮಾಡುವ ಪ್ರದೇಶಗಳಲ್ಲಿನೀವು ಮುಂದಿನ ಎರಡು ತಿಂಗಳು ಕೆಲಸ ಮಾಡುತ್ತೀರಿ. ಈ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳು ಮತ್ತು ದೂರುಗಳನ್ನು ಗಮನಿಸಿ. ಅವುಗಳಲ್ಲಿರುವ ಅಂಶಗಳನ್ನು ಪರಿವೀಕ್ಷಿಸಿ, ವರದಿ ಸಲ್ಲಿಸಿ. ತಪ್ಪಾಗಿದೆ ಎಂದು ಕಂಡು ಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಿಮಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.