ADVERTISEMENT

ಕಾಂಗ್ರೆಸ್ ಕೊಳೆಯುತ್ತಿದೆ: ಪ್ರಣವ್ ಮುಖರ್ಜಿ ಮಗಳು ಶರ್ಮಿಷ್ಠಾ ಮುಖರ್ಜಿ

ಪಿಟಿಐ
Published 30 ಡಿಸೆಂಬರ್ 2024, 0:57 IST
Last Updated 30 ಡಿಸೆಂಬರ್ 2024, 0:57 IST
ಶರ್ಮಿಷ್ಠಾ ಮುಖರ್ಜಿ
ಶರ್ಮಿಷ್ಠಾ ಮುಖರ್ಜಿ   

ನವದೆಹಲಿ: ಕಾಂಗ್ರೆಸ್ ಪಕ್ಷವು ಕೊಳೆಯಲು ಆರಂಭಿಸಿದೆ, ಪಕ್ಷದ ದುರದೃಷ್ಟಕರ ಪರಿಸ್ಥಿತಿಯ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯ ಇದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ. 

ಪ್ರಮುಖ ನಾಯಕರಲ್ಲಿ ಸೈದ್ಧಾಂತಿಕ ಕೊರತೆ ಇರುವ ಕಾರಣಕ್ಕೆ ಹಾಗೂ ಪಕ್ಷದ ಇಂದಿನ ಸ್ಥಿತಿಯ ಕಾರಣಕ್ಕೆ ಪಕ್ಷದ ಹಳೆಯ ಕಾರ್ಯಕರ್ತರ ಪೈಕಿ ಹಲವರಲ್ಲಿ ಪರಕೀಯ ಭಾವನೆ ಮೂಡಿದೆ ಎಂದು ಹೇಳಿದ್ದಾರೆ. ತಮ್ಮ ತಂದೆ ಪ್ರಣವ್ ಅವರು ಮೃತಪಟ್ಟಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯನ್ನು ಏಕೆ ಕರೆದಿರಲಿಲ್ಲ, ನಿರ್ಣಯವನ್ನು ಏಕೆ ಅಂಗೀಕರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಇದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು... ಕಾಂಗ್ರೆಸ್ಸಿನ ಸಾಂಸ್ಥಿಕ ನೆನಪುಗಳು ಮರೆಯಾಗಿದ್ದರೆ, ರಾಹುಲ್ ಗಾಂಧಿ ಮತ್ತು ಅವರ ಸುತ್ತ ಇರುವವರಿಗೆ ಈ ಹಿಂದಿನ ಇಂತಹ ಸಂದರ್ಭಗಳಲ್ಲಿ ಪಕ್ಷ ಹೇಗೆ ವರ್ತಿಸಿತ್ತು ಎಂಬುದು ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿನ ದುರದೃಷ್ಟಕರ ಪರಿಸ್ಥಿತಿಯನ್ನು ಅದೇ ಹೇಳುತ್ತದೆ’ ಎಂದು ಶರ್ಮಿಷ್ಠಾ ಅವರು ‘ಪಿಟಿಐ ವಿಡಿಯೊಸ್’ಗೆ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ಸಿನಲ್ಲಿ ನಿರ್ದಿಷ್ಟ ಕುಟುಂಬಕ್ಕೆ ಸೇರಿರದ ನಾಯಕರ ಕೊಡುಗೆಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಶರ್ಮಿಷ್ಠಾ ಅವರು, ‘ಪಿ.ವಿ. ನರಸಿಂಹ ರಾವ್ ಅವರಿಗೆ ಏನು ಮಾಡಲಾಯಿತು ಎಂಬುದನ್ನು ನಾವು ಮರೆಯಬಾರದು’ ಎಂದರು.

‘ಪ್ರಣವ್ ಅವರು ಮೃತಪಟ್ಟಾಗ ಸಂತಾಪ ಸೂಚಿಸಲು ಸಿಡಬ್ಲ್ಯುಸಿ ಸಭೆಯನ್ನು ಕಾಂಗ್ರೆಸ್ ಕರೆಯಲಿಲ್ಲ. ರಾಷ್ಟ್ರಪತಿ ಸ್ಥಾನದಲ್ಲಿದ್ದವರು ಮೃತ‍ಪಟ್ಟಾಗ ಸಿಡಬ್ಲ್ಯುಸಿ ಸಭೆ ಕರೆಯುವುದಿಲ್ಲ ಎಂದು ಹಿರಿಯ ನಾಯಕರೊಬ್ಬರು ನನಗೆ ಹೇಳಿದರು. ಅದು ಸುಳ್ಳು. ಕೆ.ಆರ್. ನಾರಾಯಣನ್ ಅವರು ಮೃತಪಟ್ಟಾಗ ಸಿಡಬ್ಲ್ಯುಸಿ ಸಭೆ ಕರೆಯಲಾಗಿತ್ತು, ಪ್ರಣವ್ ಅವರೇ ಸಂತಾಪ ಸಂದೇಶದ ಕರಡನ್ನು ಸಿದ್ಧಪಡಿಸಿದ್ದರು...’ ಎಂದು ಶರ್ಮಿಷ್ಠಾ ಅವರು ‘ಎಕ್ಸ್‌’ ಮೂಲಕ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.