ADVERTISEMENT

ನ್ಯಾಯಾಂಗ ನಿಂದನೆ: ಸುಪ್ರೀಂ ಆದೇಶದಂತೆ ₹1 ದಂಡ ಪಾವತಿಸಿದ ಪ್ರಶಾಂತ್‌ ಭೂಷಣ್‌

ತೀರ್ಪು ಮರುಪರಿಶೀಲನೆಗೆ ಅರ್ಜಿ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 7:41 IST
Last Updated 14 ಸೆಪ್ಟೆಂಬರ್ 2020, 7:41 IST
ಒಂದು ರೂಪಾಯಿ ನಾಣ್ಯ ತೋರಿಸುತ್ತಿರುವ ವಕೀಲ ಪ್ರಶಾಂತ್‌ ಭೂಷಣ್–ಸಂಗ್ರಹ ಚಿತ್ರ
ಒಂದು ರೂಪಾಯಿ ನಾಣ್ಯ ತೋರಿಸುತ್ತಿರುವ ವಕೀಲ ಪ್ರಶಾಂತ್‌ ಭೂಷಣ್–ಸಂಗ್ರಹ ಚಿತ್ರ   

ನವದೆಹಲಿ: ಸುಪ್ರೀಂ ಕೋರ್ಟ್‌ ವಿಧಿಸಿದ್ದ ₹1 ದಂಡವನ್ನು ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಅವರು ಸೋಮವಾರ ಪಾವತಿಸಿದರು. 'ದಂಡ ಪಾವತಿಸಿದ ಮಾತ್ರಕ್ಕೆ ಕೋರ್ಟ್‌ ಆದೇಶವನ್ನು ಒಪ್ಪಿದ್ದೇನು ಎಂದು ಅರ್ಥವಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಪ್ರಶಾಂತ್‌ ಭೂಷಣ್‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್‌ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ಸುಪ್ರೀಂ ಕೋರ್ಟ್‌, ಒಂದು ರೂಪಾಯಿ ದಂಡ ವಿಧಿಸಿತ್ತು. ಸೆ.15ರ ಒಳಗಾಗಿ ದಂಡ ಪಾವತಿಸುವಂತೆ ಸೂಚಿಸಿತ್ತು.

ADVERTISEMENT

ಒಂದು ರೂಪಾಯಿ ದಂಡ ವಿಧಿಸಿದ ನ್ಯಾಯಾಂಗ ನಿಂದನೆ ಕ್ರಿಮಿನಲ್‌ ಪ್ರಕರಣವನ್ನು ಬೇರೊಂದು ವಿಸ್ತೃತ ಪೀಠದಲ್ಲಿ ಪ್ರಶ್ನಿಸುವ ಅಧಿಕಾರ ನೀಡುವಂತೆ ಕೋರಿ ಶನಿವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಸುಪ್ರೀಂಕೋರ್ಟ್‌ ಹಾಗೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್‌ ಮಾಡಿದ್ದ ಪ್ರಕರಣದಲ್ಲಿ ಪ್ರಶಾಂತ್ ತಪ್ಪಿತಸ್ಥರು ಎಂದು ಆಗಸ್ಟ್‌14ರಂದು‌ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅವರು ಮಾಡಿದ್ದ ಎರಡು ಟ್ವೀಟ್‌ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಹೇಳಿತ್ತು. ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕ್ಷಮೆಯಾಚಿಸಲು ಪ್ರಶಾಂತ್‌ ಭೂಷಣ್‌ ನಿರಾಕರಿಸಿದ್ದರು. ಜೂನ್‌ 27 ಹಾಗೂ 29ರಂದು ಅವರು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.