ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಯಾಚನೆಗೆ ಪ್ರಶಾಂತ್‌ ಭೂಷಣ್‌ ನಿರಾಕರಣೆ

ಏಜೆನ್ಸೀಸ್
Published 24 ಆಗಸ್ಟ್ 2020, 10:15 IST
Last Updated 24 ಆಗಸ್ಟ್ 2020, 10:15 IST
ಪ್ರಶಾಂತ್‌ ಭೂಷನ್‌
ಪ್ರಶಾಂತ್‌ ಭೂಷನ್‌   

ನವದೆಹಲಿ:ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕ್ಷಮೆಯಾಚಿಸಲು ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ನಿರಾಕರಿಸಿದ್ದಾರೆ.

‘ಅಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರೆ ನನ್ನ ಆತ್ಮಸಾಕ್ಷಿಗೆ ಮೋಸಮಾಡಿದಂತಾಗುತ್ತದೆ’ ಎಂದು ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ.

ಈ ಬಗ್ಗೆ ನ್ಯಾಯಾಲಯಕ್ಕೆ ಪೂರಕ ಹೇಳಿಕೆಗಳನ್ನು ಸೋಮವಾರ ಸಲ್ಲಿಸಿರುವ ಅವರು, ‘ನನ್ನ ನಂಬಿಕೆಗಳಿಗಾಗಿ ಷರತ್ತುಬದ್ಧ ಅಥವಾ ಬೇಷರತ್‌ ಆಗಿ ಕ್ಷಮೆಯಾಚಿಸುವುದು ಅಪ್ರಾಮಾಣಿಕತೆಯಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯನ್ನು ಮರು ಪರಿಶೀಲಿಸಲು ಪ್ರಶಾಂತ್‌ ಭೂಷಣ್‌ ಅವರಿಗೆ ಸುಪ್ರೀಂಕೋರ್ಟ್‌ ಆಗಸ್ಟ್‌ 20ರಂದು ಸೂಚಿಸಿತ್ತು. ಇದಕ್ಕಾಗಿ ಆಗಸ್ಟ್‌ 24ರವರೆಗೆ ಕಾಲಾವಕಾಶ ನೀಡಿತ್ತು.‌

ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ತೀರ್ಪು ನೀಡಿತ್ತು.

ಪ್ರಶಾಂತ್‌ ಭೂಷಣ್‌ ಅವರು ಮಾಡಿದ್ದ ಒಂದು ಟ್ವೀಟ್ ಸುಪ್ರೀಂ ಕೋರ್ಟ್‌ನ‌ ಈ ಹಿಂದಿನ ಕೆಲವು ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಸಂಬಂಧಿಸಿದ್ದಾಗಿತ್ತು. ಇನ್ನೊಂದು ಟ್ವೀಟ್‌, ಹಾಲಿ ಸಿಜೆಐ ಅವರ ಚಿತ್ರವೊಂದನ್ನು ಉಲ್ಲೇಖಿಸಿ ಮಾಡಿದ್ದಾಗಿತ್ತು. ಟ್ವೀಟ್‌ಗಳ ಮೂಲಕ ಪ್ರಶಾಂತ್ ಭೂಷಣ್ ಅವರು ಆಡಿರುವ ಮಾತುಗಳು ‘ಕೀಳು, ಹಗೆತನದಿಂದ’ ಕೂಡಿದವು ಎಂದು ಕೋರ್ಟ್‌ ಹೇಳಿತ್ತು.

ಸುಪ್ರೀಂಕೋರ್ಟ್‌ ಹಾಗೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್‌ ಮಾಡಿದ್ದ ಪ್ರಕರಣದಲ್ಲಿ ಪ್ರಶಾಂತ್ ತಪ್ಪಿತಸ್ಥರು ಎಂದು ಆಗಸ್ಟ್‌14ರಂದು‌ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಪ್ರಶಾಂತ್‌ ಭೂಷಣ್‌ ಶಿಕ್ಷೆಯಿಂದ ಪಾರು ಸಾಧ್ಯತೆ ಕಡಿಮೆ

ತಮ್ಮ ಟ್ವೀಟ್‌ಗಳ ಬಗ್ಗೆ ಕ್ಷಮೆಯಾಚಿಸುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿರುವುದರಿಂದ, ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಅವರು ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಭೂಷಣ್ ಅವರು ಅವಹೇಳನಕಾರಿ ಟ್ವೀಟ್‌ಗಳನ್ನು ಪೋಸ್ಟ್‌ ಮಾಡಿದ್ದರು. ಈ ಕಾರಣದಿಂದ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆನಡೆಸಿ, ತಪ್ಪಿತಸ್ಥರು ಎಂದು ಹೇಳಿತ್ತು.ಪೀಠವು ಕ್ಷಮೆಯಾಚಿಸಲು ಇದೇ 24 ರವರೆಗೆ ಕಾಲಾವಕಾಶ ನೀಡಿದೆ. ಕ್ಷಮೆಯಾಚಿಸದಿದ್ದರೆ, ಶಿಕ್ಷೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.