ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ವಿಚಾರಣೆ ಮುಂದೂಡಲು ಪ್ರಶಾಂತ್‌ ಭೂಷಣ್‌ ಅರ್ಜಿ

ನ್ಯಾಯಾಂಗ ನಿಂದನೆ ಪ್ರಕರಣ

ಪಿಟಿಐ
Published 19 ಆಗಸ್ಟ್ 2020, 15:23 IST
Last Updated 19 ಆಗಸ್ಟ್ 2020, 15:23 IST
ಪ್ರಶಾಂತ್‌ ಭೂಷಣ್‌
ಪ್ರಶಾಂತ್‌ ಭೂಷಣ್‌   

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನ ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಪುನರ್‌ಪರಿಶೀಲಿಸಲು ಅರ್ಜಿ ಸಲ್ಲಿಸುವವರೆಗೂ ಹಾಗೂ ಅದನ್ನು ಪರಿಗಣಿಸುವವರೆಗೂ, ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದುವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಹಾಗೂ ಮುಖ್ಯನ್ಯಾಯಮೂರ್ತಿ(ಸಿಜೆಐ)ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್‌ ಮಾಡಿದ್ದ ಪ್ರಕರಣದಲ್ಲಿ ಭೂಷಣ್‌ ತಪ್ಪಿತಸ್ಥರು ಎಂದು ಆ.14ರಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಗುರುವಾರ(ಆ.20) ಶಿಕ್ಷೆಯ ಪರಿಮಾಣದ ವಿಚಾರಣೆ ನಿಗದಿಯಾಗಿತ್ತು. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ₹2 ಸಾವಿರ ದಂಡ ಅಥವಾ ಜೈಲು ಶಿಕ್ಷೆ, ದಂಡ ಎರಡನ್ನೂ ವಿಧಿಸುವ ಸಾಧ್ಯತೆ ಇದೆ. ಆದರೆ ಇದಕ್ಕೂ ಮುನ್ನವೇ ಈ ವಿಚಾರಣೆ ಮುಂದೂಡುವಂತೆ ಭೂಷಣ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ಆಗಸ್ಟ್‌ 14ರಂದು ನೀಡಿದ್ದ ತೀರ್ಪನ್ನು ವಿಸ್ತೃತವಾಗಿ ಅಧ್ಯಯನ ಮಾಡಿದ ಬಳಿಕ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ನಾನು ನಿರ್ಧರಿಸಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದಿದ್ದೇನೆ. ವಾಕ್‌ ಸ್ವಾತಂತ್ರ್ಯದ ವಿಚಾರದಲ್ಲಿ ಈ ತೀರ್ಪುನ ವಿವಿಧ ಆಯಾಮಗಳು ಮಹತ್ವದ್ದಾಗಿದೆ. ತೀರ್ಪು ನೀಡಿದ 30 ದಿನದೊಳಗಾಗಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕಾರಣದಿಂದ ಆ.20ರಂದು ನಿಗದಿಪಡಿಸಿರುವ ವಿಚಾರಣೆಯನ್ನು ಮುಂದೂಡಬೇಕು’ ಎಂದು ಅರ್ಜಿಯಲ್ಲಿ ಭೂಷಣ್‌ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.