ADVERTISEMENT

ಬಿಹಾರ ಬಿಜೆಪಿ ನಾಯಕರು ಲಾಲು ಪ್ರಸಾದ್‌ಗಿಂತಲೂ ಭ್ರಷ್ಟರು: ಪ್ರಶಾಂತ್ ಕಿಶೋರ್

ಪಿಟಿಐ
Published 8 ಆಗಸ್ಟ್ 2025, 13:08 IST
Last Updated 8 ಆಗಸ್ಟ್ 2025, 13:08 IST
<div class="paragraphs"><p>ಪ್ರಶಾಂತ್ ಕಿಶೋರ್</p></div>

ಪ್ರಶಾಂತ್ ಕಿಶೋರ್

   

ಪಿಟಿಐ

ಪಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ಬಿಹಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ‘ಜನ ಸುರಾಜ್‌‘ ಪಕ್ಷದ ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌ ಆರೋಪಿಸಿದ್ದಾರೆ. ಹಾಗೆಯೇ, ರಾಜ್ಯ ಬಿಜೆಪಿ ನಾಯಕರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್‌ ಅವರಿಗಿಂತಲೂ 'ಭ್ರಷ್ಟರು' ಎಂದು ದೂರಿದ್ದಾರೆ.

ADVERTISEMENT

ಬಿಹಾರ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹಾಗೂ ಸದ್ಯ ಆರೋಗ್ಯ ಸಚಿವರಾಗಿರುವ ಮಂಗಲ್‌ ಪಾಂಡೆ ವಿರುದ್ಧ ಪ್ರಶಾಂತ್‌ ಕಿಶೋರ್‌ ನೇರ ವಾಗ್ದಾಳಿ ನಡೆಸಿದ್ದಾರೆ.

ಬಿಹಾರ ಆರೋಗ್ಯ ಇಲಾಖೆಯು, ತಲಾ ₹ 28 ಲಕ್ಷದಂತೆ 1,200 ಆಂಬುಲೆನ್ಸ್‌ಗಳನ್ನು ಖರೀದಿಸಲು ಮುಂದಾಗಿದೆ. ಈ ಮೊತ್ತವು, ಒಡಿಶಾ ಮತ್ತು ಉತ್ತರ ಪ್ರದೇಶ ಪಾವತಿಸುತ್ತಿರುವುದಕ್ಕಿಂತ ದುಪ್ಪಟ್ಟಾಗಿದೆ ಎಂದು ಒತ್ತಿ ಹೇಳಿದ್ದಾರೆ. ಹಾಗೆಯೇ, ಪಾಂಡೆ ಅವರು ಕೋವಿಡ್‌–19 ಸಾಂಕ್ರಾಮಿಕದ ವೇಳೆ ದೆಹಲಿಯಲ್ಲಿ ತಮ್ಮ ಪತ್ನಿಯ ಹೆಸರಲ್ಲಿ ಫ್ಲಾಟ್‌ ಖರೀದಿಸಿದ್ದಾರೆ. ಇದಕ್ಕೆ, ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್‌ ಜೈಸ್ವಾಲ್‌ ನೆರವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಜೈಸ್ವಾಲ್‌ ಅವರ ಪಾಲುದಾರಿಕೆ ಇರುವ ಕಿಶಾನ್‌ಗಂಜ್‌ ವೈದ್ಯಕೀಯ ಕಾಲೇಜಿಗೆ ಡೀಮ್ಡ್‌ ವಿಶ್ವವಿದ್ಯಾಲಯದ ಮಾನ್ಯತೆ ಕಲ್ಪಿಸುವ ಮೂಲಕ ಪಾಂಡೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದೂ ಹೇಳಿದ್ದಾರೆ.

ಜೈಸ್ವಾಲ್‌ ಅವರು 2019ರ ಆಗಸ್ಟ್‌ 6ರಂದು ಪಾಂಡೆ ಅವರ ತಂದೆಯ ಖಾತೆಗೆ ₹ 25 ಲಕ್ಷ ವರ್ಗಾಯಿಸಿದ್ದರು. ಆ ಹಣವನ್ನು ದೆಹಲಿಯಲ್ಲಿ ಫ್ಲಾಟ್‌ ಖರೀದಿಸಲು ಬಳಸಲಾಗಿತ್ತು. ಆದರೆ, ಪಾಂಡೆ ಅವರು 2020ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಾಲದ ಮಾಹಿತಿಯನ್ನು ಏಕೆ ಉಲ್ಲೇಖಿಸಿರಲಿಲ್ಲ ಎಂದು ಕೇಳಿದ್ದಾರೆ.

ತಮ್ಮನ್ನು ತಾವು ಶುದ್ಧಹಸ್ತರು ಎಂದು ಹೇಳಿಕೊಳ್ಳುವ ಬಿಜೆಪಿಯವರು, ಮೇವು ಹಗರಣ, ರೈಲ್ವೆ ಹಗರಣಗಳಲ್ಲಿ ಭಾಗಿಯಾಗಿದ್ದ ಆರ್‌ಜೆಡಿ ನಾಯಕ ಲಾಲು ಅವರಿಗಿಂತಲೂ ದೊಡ್ಡ ಭ್ರಷ್ಟರು ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.