ADVERTISEMENT

ಆಸ್ಪತ್ರೆಗಳಿಗೆ ಅಲೆದಾಟ: ಆಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟ ಗರ್ಭಿಣಿ

13 ಗಂಟೆಗಳ ಹೋರಾಟ ವ್ಯರ್ಥ; ತನಿಖೆಗೆ ಆದೇಶ

ಪಿಟಿಐ
Published 7 ಜೂನ್ 2020, 7:14 IST
Last Updated 7 ಜೂನ್ 2020, 7:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೊಯಿಡಾ: ಸತತ 13 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿ ಬಳಲಿದ ಗರ್ಭಿಣಿಯೊಬ್ಬರು ಆಂಬುಲೆನ್ಸ್‌ನಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದಿದೆ.

ಚಿಕಿತ್ಸೆಗಾಗಿ ಒಂದೊಂದು ಆಸ್ಪತ್ರೆಯನ್ನೂ ತಲುಪಿದಾಗ, ‘ಬೆಡ್ ಖಾಲಿಯಿಲ್ಲ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ’ ಎಂಬ ಉತ್ತರ ಸಿಗುತ್ತಿತ್ತು. ಸರ್ಕಾರಿ ಆಸ್ಪತ್ರೆಯೂ ಸೇರಿದಂತೆ ಒಟ್ಟು 8 ಆಸ್ಪತ್ರೆಗಳಿಗೆ ಎಡತಾಕಿದ ನೀಲಂ (30) ಅವರು ಕೊನೆಗೆ ಆಂಬುಲೆನ್ಸ್‌ನಲ್ಲೇ ಪ್ರಾಣ ಕಳೆದುಕೊಂಡರು.

ಗರ್ಭಿಣಿಯ ಪತಿ ವಿಜೇಂದ್ರ ಸಿಂಗ್ ಅವರ ಹೇಳಿಕೆ ಆಧರಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗೌತಮಬುದ್ಧ ನಗರ ಜಿಲ್ಲಾಡಳಿತ, ತನಿಖೆಗೆ ಆದೇಶಿಸಿದೆ.

ADVERTISEMENT

ನೊಯಿಡಾ–ಗಾಜಿಯಾಬಾದ್ ಗಡಿಯ ಖೋಡಾ ಕಾಲೊನಿ ನಿವಾಸಿಯಾದ ನೀಲಂ ಅವರು ಆಗಾಗ್ಗೆ ತಪಾಸಣೆಗೆ ಹೋಗಿಬರುತ್ತಿದ್ದ ಶಿವಾಲಿಕ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನಿರಾಕರಿಲಾಯಿತು. ಶುಕ್ರವಾರ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅಲ್ಲಿನ ವೈದ್ಯರು ನಿರಾಕರಿಸಿದ ಬಳಿಕ ಪ್ರತಿಯೊಂದು ಆಸ್ಪತ್ರೆಗಳಿಗೆ ಅಲೆದಾಡಬೇಕಾಯಿತುಎಂದು ವಿಜೇಂದ್ರ ಸಿಂಗ್ ಹೇಳಿದ್ದಾರೆ.

ಜೇಪಿ, ಮ್ಯಾಕ್ಸ್ ಮೊದಲಾದ ಆಸ್ಪತ್ರೆಗಳಿಗೆ ಅಲೆದಾಡಿದ ಬಳಿಕ ಜಿಐಎಂಎಸ್‌ನಲ್ಲಿ ಕೊನೆಯ ಪ್ರಯತ್ನವಾಗಿ ವೆಂಟಿಲೇಟರ್‌ ಅಳವಡಿಸಲಾಯಿತು. ಅಷ್ಟೊತ್ತಿಗೆ ಕಾಲ ಮಿಂಚಿತ್ತು ಎಂದು ಸಿಂಗ್ ಹೇಳಿದ್ದಾರೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮುನೀಂದ್ರನಾಥ ಉಪಾಧ್ಯಾಯ ಹಾಗೂ ಮುಖ್ಯ ಆರೋಗ್ಯಾಧಿಕಾರಿ ದೀಪಕ್ ಒಹ್ರಿ ಅವರು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾಡಳಿತವೂ ತನಿಖೆ ನಡೆಸುತ್ತಿದ್ದು, ಚಿಕಿತ್ಸೆ ನಿರಾಕರಿಸಿ ನಿರ್ಲಕ್ಷ್ಯ ತೋರಿದ ಎರಡು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.

15 ದಿನಗಳ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ.ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದೇ ನವಜಾತ ಶಿಶುವೊಂದು ಗೌತಮಬುದ್ಧ ನಗರದಲ್ಲಿ ಮೇ 25ರಂದು ಮೃತಪಟ್ಟಿತ್ತು. ಮಗುವಿನ ತಂದೆಯು ಅಂದು ರಾತ್ರಿ ಗ್ರೇಟರ್ ನೋಯಿಡಾದಿಂದ ನೊಯಿಡಾದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.