
ಪ್ರೇಮ್ ಸಿಂಗ್ ತಮಾಂಗ್
ಚಿತ್ರ: ಎಕ್ಸ್ / @PSTamangGolay
ಗ್ಯಾಂಗ್ಟಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ನಾಯಕ ಪ್ರೇಮ್ ಸಿಂಗ್ ತಮಾಂಗ್ ಸೋಮವಾರ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ನೇಪಾಳಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಲ್ಲಿನ ಪಲ್ಜೋರ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಪ್ರೇಮ್‌ಸಿಂಗ್ ಹಾಗೂ ಸಂಪುಟದ 11 ಮಂದಿ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಪಕ್ಷದ 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ತಮಾಂಗ್ ಪರ ಘೋಷಣೆ ಕೂಗಿದರು.
ಸಿಕ್ಕಿಂ ರಾಜ್ಯದಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಷೇಧವಿದ್ದರೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಮುಖ್ಯಮಂತ್ರಿ ಜೊತೆ ಸೋನಂ ಲಾಮಾ, ಅರುಣ್ ಕುಮಾರ್ ಉಪ್ರೇಟಿ, ಸಮದುಪ್ ಲೆಪ್ಚಾ, ಭೀಮ್ ಹಂಗ್ ಲಿಂಬೂ, ಭೋಜರಾಜ ರಾಯ್, ಜಿ.ಟಿ.ಧುನ್ಗೆಲ್, ಪುರನ್ ಕುಮಾರ್ ಗುರುಂಗ್, ಪಿಂಟ್ಸೊ ನಮಗ್ಯಾಲ್ ಲೆಪ್ಚಾ, ನರ್ ಬಹಾದ್ದೂರ್ ದಹಲ್, ರಾಜು ಬಸ್ನೇಟ್, ಟಿರ್ಸಿಂಗ್ ತೆಂಡುಪ್ ಭುಟಿಯಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹಿಂದಿನ ಸಂಪುಟದಲ್ಲಿದ್ದ ನಾಲ್ವರು ಸಚಿವರನ್ನು ಮಾತ್ರ ಈ ಸಂಪುಟದಲ್ಲಿ ಮತ್ತೆ ಸೇರಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಪತ್ನಿ ಕೃಷ್ಣ ಕುಮಾರಿ ರಾಯ್ ಸೇರಿದಂತೆ ನಾಲ್ವರು ಮಹಿಳೆಯರು ಎಸ್‌ಕೆಎಂನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.