ADVERTISEMENT

ದೆಹಲಿಯಲ್ಲಿ ಆಯುಷ್ಮಾನ್ ಭಾರತ್ ವಿಮಾ ಯೋಜನೆಯ ಅನುಷ್ಠಾನಕ್ಕೆ ಸಿದ್ಧತೆ

ಪಿಟಿಐ
Published 13 ಮಾರ್ಚ್ 2025, 11:25 IST
Last Updated 13 ಮಾರ್ಚ್ 2025, 11:25 IST
   

ನವದೆಹಲಿ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅನುಷ್ಠಾನಕ್ಕಾಗಿ ದೆಹಲಿ ಸರ್ಕಾರ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಆದಾಗ್ಯೂ, ಒಪ್ಪಂದಕ್ಕೆ ಸಹಿ ಹಾಕುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಮೂಲಗಳ ಪ್ರಕಾರ, ಮಾರ್ಚ್ 18ರಂದು ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

ದೆಹಲಿ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಈ ಯೋಜನೆಯ ಅನುಷ್ಠಾನವೂ ಒಂದಾಗಿತ್ತು. ಹಿಂದಿನ ಎಎಪಿ ಸರ್ಕಾರ ತನ್ನದೇ ಆದ ಯೋಜನೆಯನ್ನು ರೂಪಿಸಿಕೊಂಡು ಎಬಿ-ಪಿಎಂಜೆಎವೈ ಅನ್ನು ಜಾರಿಗೆ ತರಲು ನಿರಾಕರಿಸಿತ್ತು.

ADVERTISEMENT

ಏನಿದು ಆಯುಷ್ಮಾನ್ ಭಾರತ್‌ ಯೋಜನೆ

ದೇಶದ ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ 2018ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಆಯುಷ್ಮಾನ್ ಭಾರತ್‌ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸುತ್ತಿದೆ. ಮೊದಲನೆಯದ್ದು, ಆಯುಷ್ಮಾನ್ ಆರೋಗ್ಯ ಮಂದಿರ. ಎರಡನೆಯದ್ದು, ಆಯುಷ್ಮಾನ್ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ–ಪಿಎಂಜೆಎವೈ).

ಈ ಯೋಜನೆಯಡಿ ಬಡ ಕುಟುಂಬಗಳು ವಾರ್ಷಿಕ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಪಡೆಯಲು ಅರ್ಹರಾಗಿದ್ದರು. ಅಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದ ಚಿಕಿತ್ಸೆಗಳನ್ನು ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದಾಗಿತ್ತು.

ವಿಸ್ತೃತ ರೂಪ ಪಡೆದ ಆಯುಷ್ಮಾನ್

ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಯೋಜನೆಯನ್ನು 2024ರ ಅಕ್ಟೋಬರ್ 29ರಂದು ವಿಸ್ತರಿಸಲಾಗಿದೆ. 70 ಮತ್ತು ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯನ್ನು ಒದಗಿಸಲಿದೆ.

ಪರಿಷ್ಕೃತ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ₹5 ಲಕ್ಷದವರೆಗಿನ ವಿಮಾ ಸೌಲಭ್ಯ ಹಾಗೆಯೇ ಇರಲಿದೆ. ಹೆಚ್ಚುವರಿಯಾಗಿ ಆದಾಯದ ಇತಿ ಮಿತಿಗಳಿಲ್ಲದೆ, 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ವಾರ್ಷಿಕ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.