ADVERTISEMENT

54 ಗಣ್ಯರಿಗೆ ಪದ್ಮ ಪುರಸ್ಕಾರ, ರಾಷ್ಟ್ರಪತಿಗೆ ತಿಮ್ಮಕ್ಕ ಆಶೀರ್ವಾದ

ಪಿಟಿಐ
Published 17 ಮಾರ್ಚ್ 2019, 2:29 IST
Last Updated 17 ಮಾರ್ಚ್ 2019, 2:29 IST
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಅಶೀರ್ವದಿಸಿದ ಸಾಲುಮರದ ತಿಮ್ಮಕ್ಕ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಅಶೀರ್ವದಿಸಿದ ಸಾಲುಮರದ ತಿಮ್ಮಕ್ಕ   

ನವದೆಹಲಿ:ಕರ್ನಾಟಕದವರಾದ ಸಾಲುಮರದ ತಿಮ್ಮಕ್ಕ, ಪುರಾತತ್ವ ತಜ್ಞೆ ಶಾರದಾ ಶ್ರೀನಿವಾಸನ್, ಪರಮಾಣು ವಿಜ್ಞಾನಿ ಡಾ.ರೋಹಿಣಿ ಮಧುಸೂದನ್ ಗೋಡಬೋಲೆ,ಇಸ್ರೊ ನಿವೃತ್ತ ವಿಜ್ಞಾನಿ ಎಸ್.ನಂಬಿ ನಾರಾಯಣನ್, ನಟ ಮನೋಜ್ ಬಾಜಪೇಯಿ,ಜನಪದ ಗಾಯಕಿ ತೀಜನ್ ಭಾಯಿ, ಲಾರ್ಸೆನ್ ಆ್ಯಂಡ್ ಟರ್ಬೊ ಮುಖ್ಯಸ್ಥ ಅನಿಲ್ ಕುಮಾರ್ ನಾಯ್ಕ್ ಸೇರಿದಂತೆ 54ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.

106ರ ಹಿರಿಯ ಜೀವ ಸಾಲುಮರದ ತಿಮ್ಮಕ್ಕ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹಣೆಯ ಮೇಲೆ ಕೈ ಇರಿಸಿ ಆಶೀರ್ವದಿಸಿದ ವಿರಳ ಹಾಗೂ ವಿಶೇಷ ಕ್ಷಣಕ್ಕೂರಾಷ್ಟ್ರಪತಿ ಭವನ ಶನಿವಾರ ಸಾಕ್ಷಿಯಾಯಿತು.

ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಇಸ್ರೊ ನಿವೃತ್ತ ವಿಜ್ಞಾನಿ ಎಸ್. ನಂಬಿ ನಾರಾಯಣನ್, ನಟ ಮನೋಜ್ ಬಾಜಪೇಯಿ ಹಾಗೂ ಪುರಾತತ್ವ ತಜ್ಞೆ ಶಾರದಾ ಶ್ರೀನಿವಾಸನ್ ಅವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು– ಪಿಟಿಐ ಚಿತ್ರ

ಸಾಲುಮರದ ತಿಮ್ಮಕ್ಕ,ಶಾರದಾ ಶ್ರೀನಿವಾಸನ್,ಡಾ.ರೋಹಿಣಿ ಮಧುಸೂದನ್ ಗೋಡಬೋಲೆ ಅವರು ಪದ್ಮಶ್ರೀ ಸ್ವೀಕರಿಸಿದರು.

ADVERTISEMENT

ಜನಪದ ಗಾಯಕಿ ತೀಜನ್ ಭಾಯಿ, ಲಾರ್ಸೆನ್ ಆ್ಯಂಡ್ ಟರ್ಬೊ ಮುಖ್ಯಸ್ಥ ಅನಿಲ್ ಕುಮಾರ್ ನಾಯ್ಕ್ ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಪದ್ಮ ವಿಭೂಷಣ ನೀಡಿ ಗೌರವಿಸಲಾಯಿತು.

ಆರ್‌ಎಸ್‌ಎಸ್‌ ನಾಯಕ ದರ್ಶನ್ ಲಾಲ್ ಜೈನ್,ವಿಜ್ಞಾನಿ ಎಸ್.ನಂಬಿ ನಾರಾಯಣನ್, ಎವರೆಸ್ಟ್‌ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿ ಪಾಲ್‌ ಅವರಿಗೆ ಪದ್ಮ ಭೂಷಣ ನೀಡಲಾಯಿತು.

ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ಪಾತ್ರಗಳಲ್ಲಿ ಅಭಿನಯಿಸಿರುವ ನಟ ಮನೋಜ್ ಭಾಜಪೇಯಿ,ಲಖನೌ ಘರಾನಾದ ತಬಲಾ ವಾದಕ ಸ್ವಪನ್ ಚೌಧರಿ,ತೆಲುಗು ಸಾಹಿತಿ ಸಿರಿವೆನ್ನೇಲ ಸೀತಾರಾಮ ಶಾಸ್ತ್ರಿ ಚೆಂಬೊಲುಪದ್ಮಶ್ರೀ ಸ್ವೀಕರಿಸಿದರು.

ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ದ ಮಾಜಿ ಸಂಪಾದಕ ದೇವೇಂದ್ರ ಸ್ವರೂಪ್ ಅವರಿಗೂ ಪದ್ಮಶ್ರೀ (ಮರಣೋತ್ತರ) ನೀಡಲಾಯಿತು.

ತಮ್ಮ ಜಮೀನಿಗೆ ನೀರು ಹರಿಸಲು ಕೇವಲ ಗುದ್ದಲಿ ಹಾಗೂ ಸಲಿಕೆ ಬಳಸಿ 3 ಕಿ.ಮೀ. ಉದ್ದದ ಕಾಲುವೆ ನಿರ್ಮಿಸಿದ ಒಡಿಶಾದ ಕ್ಯೋಂಝರ್ ಜಿಲ್ಲೆಯ ಬುಡಕಟ್ಟು ವಾಸಿ ದೈತರಿ ನಾಯ್ಕ್ ಸಾಮಾಜಿಕ ಕಾರ್ಯ ವಿಭಾಗದಲ್ಲಿ ಪದ್ಮಶ್ರೀಗೆ ಭಾಜನರಾದರು.

ರಾಷ್ಟ್ರಪತಿಗೆ ಆಶೀರ್ವದಿಸಿದ ತಿಮ್ಮಕ್ಕ
106ರ ಹಿರಿಯ ಜೀವ ಸಾಲುಮರದ ತಿಮ್ಮಕ್ಕ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹಣೆಯ ಮೇಲೆ ಕೈ ಇರಿಸಿ ಆಶೀರ್ವದಿಸಿದ ವಿರಳ ಹಾಗೂ ವಿಶೇಷ ಕ್ಷಣಕ್ಕೆ ರಾಷ್ಟ್ರಪತಿ ಭವನ ಶನಿವಾರ ಸಾಕ್ಷಿಯಾಯಿತು.

ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಪದ್ಮಶ್ರೀ ಸ್ವೀಕರಿಸಲು ನಗುಮುಖದಿಂದ ವೇದಿಕೆ ಏರಿದ ತಿಮ್ಮಕ್ಕನ ಮುಗ್ಧತೆಗೆ ಈ ಶಿಷ್ಟಾಚಾರಗಳ ನಿರ್ಬಂಧವಾಗಲಿಲ್ಲ.

ಪ್ರಶಸ್ತಿ ಪಡೆಯುವಾಗ ಕ್ಯಾಮೆರಾ ಕಡೆಗೆ ನೋಡುವಂತೆ ಕೋವಿಂದ್ ಅವರು ತಿಳಿಸಿದಾಗ, ತಿಮ್ಮಕ್ಕ ಅವರ ಹಣೆಮುಟ್ಟಿ ಆಶೀರ್ವದಿಸಿದರು. ತಿಮ್ಮಕ್ಕನಿಗಿಂತ ಕೋವಿಂದ್ 33 ವರ್ಷ ಕಿರಿಯರು. ಅವರ ಈ ನಡೆಯಿಂದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ನೆರೆದಿದ್ದ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು. ಜೋರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.