
ನವದೆಹಲಿ: ಜಾಗತಿಕವಾಗಿ ಭೌಗೋಳಿಕ ಮತ್ತು ರಾಜಕೀಯ ಸಂಘರ್ಷಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಭವಿಷ್ಯದ ಪೀಳಿಗೆಯ ರಕ್ಷಣೆಗಾಗಿ ಭಾರತವು ಇಡೀ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
77ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಭಾನುವಾರ ರಾಷ್ಟ್ರಕ್ಕೆ ಸಂದೇಶ ನೀಡಿದ ಅವರು, ಆಪರೇಷನ್ ಸಿಂಧೂರ, ಮಹಿಳಾ ಸ್ವಾವಲಂಬನೆ, ವಂದೇ ಮಾತರಂ ಮತ್ತು ದೇಶದ ಆರ್ಥಿಕತೆಯ ಬೆಳವಣಿಗೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಿದರು.
‘ಜಗತ್ತಿನಲ್ಲಿ ಶಾಂತಿ ಇದ್ದರೆ ಮಾತ್ರ ಭವಿಷ್ಯದ ಮಾನವ ಪೀಳಿಗೆಯ ಭವಿಷ್ಯ ಸುಭದ್ರವಾಗಿರಲು ಸಾಧ್ಯ. ಜಾಗತಿಕ ಸಾಮರಸ್ಯಕ್ಕಾಗಿ ಭಾರತವು ಪ್ರಾಚೀನ ನಾಗರಿಕತೆಯನ್ನು ಪುನರ್ ಪರಿಚಯಿಸುವ ನಿಟ್ಟಿನಲ್ಲಿ ಶಾಂತಿದೂತನ ಪಾತ್ರವಹಿಸುತ್ತಿದೆ’ ಎಂದು ಹೇಳಿದರು.
ಇತ್ತೀಚೆಗೆ ಭಾರತವು ನಡೆಸಿದ ‘ಆಪರೇಷನ್ ಸಿಂಧೂರ’ದ ಯಶಸ್ಸು ರಾಷ್ಟ್ರೀಯ ಸುರಕ್ಷತೆಯ ಬದ್ಧತೆಯನ್ನು ತೋರಿಸುತ್ತದೆ. ಗಡಿಯಾಚೆಗಿನ ಉಗ್ರರ ನೆಲೆಗಳನ್ನು ನಾಶ ಮಾಡಿದ್ದು ರಕ್ಷಣಾ ಕ್ಷೇತ್ರದಲ್ಲಿನ ಭಾರತದ ಸ್ವ–ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.
‘ನಾರಿ ಶಕ್ತಿ’ಯ ಪ್ರಗತಿಯನ್ನು ಕೊಂಡಾಡಿದ ರಾಷ್ಟ್ರಪತಿ ಮುರ್ಮು ಅವರು, 2047ರ ಒಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ‘ನಾರಿ ಶಕ್ತಿ’ ಅಡಿಗಲ್ಲಾಗಿದೆ. ಮಹಿಳೆಯರ ಕ್ರಿಯಾಶೀಲ ಮತ್ತು ಸ್ವಾವಲಂಬಿ ಪಾಲುದಾರಿಕೆ ದೇಶದ ಪ್ರಗತಿಗೆ ಮಹತ್ವದ್ದಾಗಿದೆ. ಮಾದರಿ ಭಾರತದ ಕಥನವು ಅದರ ಹೆಣ್ಣು ಮಕ್ಕಳಿಂದ ಬರೆಯಲ್ಪಡುತ್ತಿದೆ ಎಂದು ಬಣ್ಣಿಸಿದರು.
‘ಮಹಿಳಾ ಸ್ವಸಹಾಯ ಸಂಘಗಳು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಹೆಚ್ಚಳವು ಮಹಿಳಾ ಮುಂದಾಳತ್ವದ ಅಭಿವೃದ್ಧಿ ರಾಷ್ಟ್ರೀಯ ಆದ್ಯತೆ ಆಗಿರುವುದನ್ನು ತೋರಿಸುತ್ತದೆ’ ಎಂದ ಅವರು, ಭಾರತ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವು, ಅಂಧರ ಮಹಿಳಾ ತಂಡದ ಟ್ವೆಂಟಿ–20 ವಿಶ್ವಕಪ್ ಗೆಲುವನ್ನು ಇದೇ ವೇಳೆ ಕೊಂಡಾಡಿದರು.
ಸೇನೆ, ಸಂಶೋಧನೆ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಗೆ ಆದ್ಯತೆ ಸಿಗುತ್ತಿದೆ. ಇದು ಸ್ವಾವಲಂಬಿ ಮಹಿಳೆಯಿಲ್ಲದೆ ವಿಕಸಿತ ಭಾರತ ಸಾಧ್ಯವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಮುರ್ಮು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.