ನವದೆಹಲಿ: ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿ ನೀಡಿದ್ದಾರೆ.
ಸಿಆರ್‌ಪಿಸಿ 197 (1) (ಭಾರತೀಯ ನ್ಯಾಯ ಸಂಹಿತೆ–2013ರ ಸೆಕ್ಷನ್ 218) ಅನ್ವಯ ರಾಷ್ಟ್ರಪತಿ ಅವರು ಈ ಕುರಿತು ಅನುಮತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ 76 ವರ್ಷದ ಲಾಲು, ಅವರ ಪುತ್ರ ತೇಜಸ್ವಿ ಯಾದವ್ (ಮಾಜಿ ಡಿಸಿಎಂ) ಮತ್ತು ಅವರ ಕುಟುಂಬದವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ವರ್ಷದ ಆಗಸ್ಟ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಭಾರತೀಯ ರೈಲ್ವೆ ಇಲಾಖೆಯ ‘ಗ್ರೂಪ್ ಡಿ’ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಅಂದಿನ (2004–2009) ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಕುಟುಂಬದವರಿಗೆ ಅಭ್ಯರ್ಥಿಗಳು ಭೂಮಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ, 2022ರಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.