ADVERTISEMENT

ಲಿಕ್ಕರ್ ಮಾಫಿಯಾ ಬಗ್ಗೆ ವರದಿ ಮಾಡಿದ್ದ ಪತ್ರಕರ್ತ ಸಾವು: ವರದಿ ಕೇಳಿದ ಪಿಸಿಐ

ಪತ್ರಕರ್ತ ಸುಲಭ್ ಶ್ರೀವಾಸ್ತವ ಸಾವಿನ ಬಗ್ಗೆ ಅನುಮಾನ

ಪಿಟಿಐ
Published 15 ಜೂನ್ 2021, 12:28 IST
Last Updated 15 ಜೂನ್ 2021, 12:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ಪತ್ರಕರ್ತ ಸುಲಭ್ ಶ್ರೀವಾಸ್ತವ (35) ಅವರ ಸಾವಿಗೆ ಸಂಬಂಧಿಸಿದಂತೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಅಲ್ಲಿನ ಸರ್ಕಾರದಿಂದ ವರದಿ ಕೇಳಿದೆ.

ಇತ್ತೀಚೆಗೆ ಶ್ರೀವಾಸ್ತವಅವರು, ಪ್ರತಾಪಗಢ್ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಸಾರಾಯಿ ದಂಧೆ ನಡೆಯುತ್ತಿದೆ ಎಂದು ಖಾಸಗಿ ಟಿವಿ ವಾಹಿನಿಯಲ್ಲಿ ವಿಸ್ತ್ರತ ವರದಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಇದು ಅಪಘಾತವಲ್ಲ, ಕೊಲೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಪಿಸಿಐ, ಉತ್ತರ ಪ್ರದೇಶ ಸರ್ಕಾರಕ್ಕೆ ಹಾಗೂ ಪ್ರತಾಪಗಢ್ ಎಸ್‌ಪಿಗೆ ಸೂಕ್ತ ವರದಿ ನೀಡುವಂತೆ ನೋಟಿಸ್ ನೀಡಿದೆ. ‘ಶ್ರೀವಾಸ್ತವಅವರ ಸಾವನ್ನು ಪಿಸಿಐ ಗಂಭೀರವಾಗಿ ‍ಪರಿಗಣಿಸಿದೆ. ಈ ಕುರಿತು ಸ್ವಯಂ ದೂರು ದಾಖಲು ಮಾಡಿಕೊಳ್ಳಲಾಗುವುದು‘ ಎಂದು ಪಿಸಿಐ ಅಧ್ಯಕ್ಷ ನ್ಯಾ ಚಂದ್ರಮೌಳಿ ಕುಮಾರ್ ತಿಳಿಸಿದ್ದಾರೆ.

ADVERTISEMENT

ವಿರೋದ ಪಕ್ಷಗಳ ನಾಯಕರಾದ ಅಖಿಲೇಶ್ ಯಾದವ್, ಮಾಯಾವತಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶ್ರೀವಾಸ್ತವಅವರ ಸಾವಿನ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಗ್ರಹಿಸಿದ್ದಾರೆ.

ಅಲ್ಲದೇ ಈ ಘಟನೆಯನ್ನು ‘ಎಡಿಟರ್ಸ್ ಗಿಲ್ಡ್‌ ಆಫ್ ಇಂಡಿಯಾ (ಇಜಿಐ)‘ ಕೂಡ ಖಂಡಿಸಿದೆ. ಪಿಸಿಐ ಪತ್ರಕರ್ತರ ಕಲ್ಯಾಣಕ್ಕೆ ಇರುವ ರಾಷ್ಟ್ರಮಟ್ಟದ ಸ್ವಾಯತ್ತ ಸಂಸ್ಥೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.