ADVERTISEMENT

ಪಿಟಿಐ ಸುದ್ದಿಮನೆಗೆ ಪ್ರಧಾನಿ ಮೋದಿ ಭೇಟಿ, ಚರ್ಚೆ

ಪಿಟಿಐ
Published 9 ಡಿಸೆಂಬರ್ 2023, 16:47 IST
Last Updated 9 ಡಿಸೆಂಬರ್ 2023, 16:47 IST
<div class="paragraphs"><p>ನವದೆಹಲಿಯಲ್ಲಿ ಶನಿವಾರ ಪಿಟಿಐ ಸುದ್ದಿಸಂಸ್ಥೆಯ ಕೇಂದ್ರ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದು, ಸಿಬ್ಬಂದಿ ಜೊತೆಗೆ ಚರ್ಚಿಸಿದರು. ಪಿಟಿಐ ಸುದ್ದಿಸಂಸ್ಥೆಯ ಸಿಇಒ ಹಾಗೂ ಪ್ರಧಾನ ಸಂಪಾದಕ ವಿಜಯ್‌ ಜೋಷಿ ಹಾಗೂ ಇತರೆ ಸಿಬ್ಬಂದಿ ಪ್ರಧಾನಿಯವರ ಮಾತು ಆಲಿಸಿದರು</p></div>

ನವದೆಹಲಿಯಲ್ಲಿ ಶನಿವಾರ ಪಿಟಿಐ ಸುದ್ದಿಸಂಸ್ಥೆಯ ಕೇಂದ್ರ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದು, ಸಿಬ್ಬಂದಿ ಜೊತೆಗೆ ಚರ್ಚಿಸಿದರು. ಪಿಟಿಐ ಸುದ್ದಿಸಂಸ್ಥೆಯ ಸಿಇಒ ಹಾಗೂ ಪ್ರಧಾನ ಸಂಪಾದಕ ವಿಜಯ್‌ ಜೋಷಿ ಹಾಗೂ ಇತರೆ ಸಿಬ್ಬಂದಿ ಪ್ರಧಾನಿಯವರ ಮಾತು ಆಲಿಸಿದರು

   

ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ (ಪಿಟಿಐ) ಸುದ್ದಿಸಂಸ್ಥೆಯ ಇಲ್ಲಿನ ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿದ್ದು, ಸುಮಾರು 1 ಗಂಟೆ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು.

ADVERTISEMENT

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಸಂಸ್ಥೆಯೊಂದರ ಕಚೇರಿಗೆ ಇದು ಅವರ ಪ್ರಥಮ ಭೇಟಿಯಾಗಿದೆ. 

ಪಿಟಿಐ ಸುದ್ದಿಸಂಸ್ಥೆಯು ಇತ್ತೀಚೆಗೆ ಆರಂಭಿಸಿರುವ ವಿಡಿಯೊ ಸುದ್ದಿಸೇವೆಯ ಸೌಲಭ್ಯಗಳನ್ನು ಹತ್ತಿರದಿಂದ ವೀಕ್ಷಿಸಿ ಅದರ ಕಾರ್ಯಶೈಲಿ ವಿವರ ಪಡೆದರು. ವಿವಿಧ ತಂಡಗಳಲ್ಲಿ ಎಲ್ಲ ಸಿಬ್ಬಂದಿ ಜೊತೆಗೂ ಚರ್ಚಿಸಿದರು.

ಸಂಪಾದಕೀಯ ಮತ್ತು ಸಂಪಾದಕೀಯೇತರ ವಿಭಾಗದ ಹಿರಿಯ ಸಿಬ್ಬಂದಿ ಜೊತೆಗೆ ಸಭೆ ನಡೆಸಿ, ಮಾಧ್ಯಮ ಕ್ಷೇತ್ರದ ಸವಾಲುಗಳು ಹಾಗೂ ಅವಕಾಶಗಳನ್ನು ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದರು.

ಒಂದು ಕಾಲದಲ್ಲಿ ಸುದ್ದಿಸೇವೆಯ ಪ್ರಮುಖ ಅಂಗವಾಗಿದ್ದ ಟೆಲಿಪ್ರಿಂಟರ್ ಮತ್ತು ಕ್ರೀಡ್‌ ಮಷೀನ್ ಅನ್ನು ಆಸಕ್ತಿಯಿಂದ ಗಮನಿಸಿದರು. ಪಿಟಿಐ ಕೇಂದ್ರ ಕಚೇರಿಯಲ್ಲಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು.

ಪಿಟಿಐ ಸುದ್ದಿಸಂಸ್ಥೆಯ ಸಿಇಒ ಮತ್ತು ಪ್ರಧಾನ ಸಂಪಾದಕ ವಿಜಯ್‌ ಜೋಷಿ ಅವರೊಂದಿಗೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ರಾಜಕೀಯ ಕ್ಷೇತ್ರದ ತಮ್ಮ ಪಯಣ ಕುರಿತು ನೇರ ಚರ್ಚೆ ನಡೆಸಿದರು.

ನಂತರ ಸಂದರ್ಶಕರ ಮಾಹಿತಿ ಪುಸ್ತಕದಲ್ಲಿ, ‘ಆಚಾರ್.. ವಿಚಾರ್‌.. ಅಬ್ ಸಮಾಚಾರ್..’ ಎಂಬ ಸಾಲುಗಳಿಂದ ಆರಂಭವಾಗುವ ಕವಿತೆಯನ್ನು ಬರೆದರು.

ಭೇಟಿಯ ನೆನಪಾಗಿ ಮೋದಿಯವರಿಗೆ ಸಿಬ್ಬಂದಿಯು, ಪಿಟಿಐ ಸುದ್ದಿಸಂಸ್ಥೆಯ ಮಹತ್ವದ ಸುದ್ದಿ ಛಾಯಾಚಿತ್ರವೊಂದನ್ನು ನೀಡಲಾಯಿತು. ವಾರಾಣಸಿಯಲ್ಲಿ ನಡೆದಿದ್ದ 2019ರ ಚುನಾವಣೆ ರ‍್ಯಾಲಿಯಲ್ಲಿ ರೋಡ್‌ ಷೋ ವೇಳೆ ಮೋದಿಯವರು ಜನಸಮೂಹದ ನಡುವೆ ಇರುವ ಚಿತ್ರ ಅದಾಗಿದೆ. 

1947ರಲ್ಲಿ ಸ್ಥಾಪನೆಯಾದ ಪಿಟಿಐ ಸುದ್ದಿಸಂಸ್ಥೆಯು 1949ರಲ್ಲಿ ತನ್ನ ಸೇವೆ ಆರಂಭಿಸಿತ್ತು. ವಿವಿಧ ಮಾಧ್ಯಮ ಸಮೂಹ ಸಂಸ್ಥೆಗಳ ಮಾಲೀಕತ್ವವಿರುವ ಸುದ್ದಿಸಂಸ್ಥೆಯು ಭಾರತೀಯ ಸುದ್ದಿ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿದೆ.

ಸುದ್ದಿ ಮತ್ತು ಸುದ್ದಿ ಛಾಯಾಚಿತ್ರಗಳ ಕ್ಷೇತ್ರದಲ್ಲಿ ಈಗಾಗಲೇ ಪ್ರಾಬಲ್ಯ ಹೊಂದಿರುವ ಪಿಟಿಐ, ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ವಿಡಿಯೊ ಸುದ್ದಿಸೇವೆಗೆ ಚಾಲನೆ ನೀಡಿತು. ಅಲ್ಪಾವಧಿಯಲ್ಲಿ ಯಶಸ್ಸುಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.