ADVERTISEMENT

ರಾಜ್ಯಸಭೆ: ಏಕರೂಪ ಸಂಹಿತೆಗೆ ಖಾಸಗಿ ಮಸೂದೆ

ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 20:52 IST
Last Updated 9 ಡಿಸೆಂಬರ್ 2022, 20:52 IST
ಸಂಸದರು
ಸಂಸದರು   

ನವದೆಹಲಿ (ಪಿಟಿಐ): ಏಕರೂಪ ನಾಗರಿಕ ಸಂಹಿತೆ ರೂಪಿಸಲು ಸಮಿತಿ ರಚಿಸುವುದಕ್ಕೆ ಅವಕಾಶ ಕೋರುವ ವಿವಾದಿತ, ಖಾಸಗಿ ಮಸೂದೆಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

ವಿರೋಧ ಪಕ್ಷಗಳ ಸದಸ್ಯರ ತೀವ್ರ ಆಕ್ಷೇಪ, ವಿರೋಧದ ನಡುವೆಯೇ ಬಿಜೆಪಿ ಸಂಸದ ಕಿರೋಡಿ ಲಾಲ್‌ ಮೀನಾ ಅವರು, ‘ಭಾರತದ ಏಕರೂಪ ನಾಗರಿಕ ಸಂಹಿತೆ ಮಸೂದೆ 2020’ ಅನ್ನು ಮಂಡಿಸಿದರು. ಏಕರೂಪ ನಾಗರಿಕ ಸಂಹಿತೆ ರಚನೆ ಹಾಗೂ ದೇಶದಾದ್ಯಂತ ಇದನ್ನು ಜಾರಿಗೊಳಿಸಲು ರಾಷ್ಟ್ರೀಯ ಮೇಲ್ವಿಚಾರಣಾ ಮತ್ತು ಪರಿಶೀಲನಾ ಸಮಿತಿ ರಚಿಸಬೇಕೆಂದು ಮಸೂದೆ ಮಂಡನೆಯ ಮೂಲಕ ಕೋರಲಾಗಿದೆ.

ಕಾಂಗ್ರೆಸ್‌, ಸಿಪಿಐ, ಸಿಪಿಎಂ, ಎಂಡಿಎಂಕೆ, ಆರ್‌ಜೆಡಿ, ಸಮಾಜವಾದಿ ಪಕ್ಷ (ಎಸ್‌ಪಿ), ಎನ್‌ಸಿಪಿ, ತೃಣಮೂಲ ಕಾಂಗ್ರೆಸ್‌ ಪಕ್ಷಗಳಿಂದ ಮಸೂದೆ ಮಂಡನೆಗೆ ವಿರೋಧ ವ್ಯಕ್ತವಾಯಿತು.

ADVERTISEMENT

‘ದೇಶದಲ್ಲಿ ಬೇರೂರಿರುವ ವಿವಿಧತೆಯಲ್ಲಿ ಏಕತೆ ಮತ್ತು ಸಾಮಾಜಿಕ ಚಿಂತನೆಯನ್ನು ಇದು ನಾಶಪಡಿಸಲಿದೆ’ ಎಂದು ಟೀಕಿಸಿದರು. ಮಸೂದೆ ಹಿಂಪಡೆಯಲು ವಿರೋಧಪಕ್ಷಗಳು ಆಗ್ರಹಿಸಿದವು. ಆದರೆ, ಸಭಾಪತಿ ಜಗದೀಪ್‌ ಧನ್‌ಕರ್‌ ಅವರು ಮತಕ್ಕೆ ಹಾಕಲು ನಿರ್ಧರಿಸಿದರು. ಆಗ ಮಸೂದೆ ಪರ 63, ವಿರುದ್ಧ 23 ಮತ ಚಲಾವಣೆಯಾದವು.

ಈ ಹಿಂದೆಯೂ ಉಲ್ಲೇಖಿತ ಮಸೂದೆಯನ್ನು ಕಾರ್ಯಸೂಚಿಯಲ್ಲಿದ್ದರೂ ಮಂಡಿಸಿರಲಿಲ್ಲ. ಎಲ್ಲ ನಾಗರಿಕರ ವೈಯಕ್ತಿಕ ಹಕ್ಕುಗಳ ರಕ್ಷಣೆಗೆ ಎಲ್ಲ ಕಾಯ್ದೆಗಳನ್ನು ಒಗ್ಗೂಡಿಸಲು ಮಸೂದೆ ಅವಕಾಶ ಕಲ್ಪಿಸಲಿದೆ.

‘ಸದಸ್ಯರ ಖಾಸಗಿ ಮಸೂದೆಯು ಅಸಂವಿಧಾನಿಕ, ಅನೈತಿಕ ಹಾಗೂ ಜಾತ್ಯತೀತ ವಿರೋಧಿಯಾಗಿದೆ. ಕೇಂದ್ರವು ಈ ಮಸೂದೆಯ ಮೂಲಕ ಜನರನ್ನು ಅಪಾಯಕಾರಿ ಕೂಪಕ್ಕೆ ತಳ್ಳಿ, ಆಳ ನೋಡುವ ತಂತ್ರ ಅನುಸರಿಸುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್‌ನ ಜವಾಹರ್‌ ಸಿರ್ಕರ್‌ ದೂರಿದ್ದಾರೆ.

‘ಕಾಶ್ಮೀರ ನಾಶಗೊಳಿಸಿರುವ ಕೇಂದ್ರವು ಈ ಮಸೂದೆ ಮೂಲಕ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತ ಹೇರಲು ಹೊರಟಿದೆ. ಇದು ದೇಶವನ್ನು ದುರಂತಕ್ಕೆ ನೂಕಲಿದೆ’ ಎಂದು ಎಂಡಿಎಂಕೆ ಸಂಸದ ವೈಕೊ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಸಂಸದರಾದ ಎಲ್‌.ಹನುಮಂತಯ್ಯ, ಇಮ್ರಾನ್‌ ಪ್ರತಾಪ್‌ಗಡಿ ಮತ್ತು ಜೆ.ಬಿ. ಮಥೇರ್‌ ಹಿಸಾಮ್, ಸಿಪಿಎಂ ಸಂಸದರಾದ ಎಲಾಮ್‌ರಾಮ್‌ ಕರೀಂ, ವಿಕಾಸ್‌ ರಂಜನ್‌ ಭಟ್ಟಾಚಾರ್ಯ, ವಿ.ಶಿವದಾಸನ್‌, ಜಾನ್‌ ಬಿಟ್ಟಾಸ್‌ ಮತ್ತು ಎ.ಎ.ರಹೀಂ, ಡಿಎಂಕೆಯ ತಿರುಚಿ ಶಿವ, ಸಿಪಿಐನ ಪಿ.ಸಂತೋಷ್‌ ಕುಮಾರ್‌ ಅವರೂ ಮಸೂದೆ ವಿರೋಧಿಸಿದರು. ಇದು ದೇಶದಲ್ಲಿ ಧ್ರುವೀಕರಣಕ್ಕೆ ದಾರಿಯಾಗಲಿದೆ ಎಂದು ದೂರಿದರು.

ಸದನದ ನಾಯಕ ಪೀಯೂಷ್‌ ಗೋಯಲ್‌ ಅವರು ವಿರೋಧ ಪಕ್ಷಗಳ ಆರೋಪಗಳಿಗೆ ಆಕ್ಷೇಪ
ವ್ಯಕ್ತಪಡಿಸಿದರು.ಖಾಸಗಿ ಮಸೂದೆ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ ಎಂದರು.

ಲೋಕಸಭೆಯಲ್ಲಿ 50ಕ್ಕೂ ಅಧಿಕ ಮಸೂದೆ ಮಂಡನೆ:ಇವಿಎಂ ಬದಲು ಈ ಹಿಂದೆ ಇದ್ದ ಮತದಾನ ವ್ಯವಸ್ಥೆ ಜಾರಿಗೊಳಿಸುವುದೂ ಸೇರಿ 50ಕ್ಕೂ ಹೆಚ್ಚು ಖಾಸಗಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

---

ಎನ್‌ಜೆಎಸಿ ಖಾಸಗಿ ಮಸೂದೆ

ನವದೆಹಲಿ (ಪಿಟಿಐ): ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದ (ಎನ್‌ಜೆಎಸಿ) ಮೂಲಕ ನ್ಯಾಯಮೂರ್ತಿಗಳ ನೇಮಕಕ್ಕೆ ಅವಕಾಶ ಕೊಡುವ ಖಾಸಗಿ ಮಸೂದೆಯನ್ನು ಸಿಪಿಎಂನ ಬಿಕಾಶ್‌ ರಂಜನ್‌ ಭಟ್ಟಾಚಾರ್ಯ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಆಮ್‌ ಆದ್ಮಿ ಪಕ್ಷದ ರಾಘವ್‌ ಚಡ್ಡಾ ಈ ಖಾಸಗಿ ಮಸೂದೆ ವಿರೋಧಿಸಿದರು.

ಧ್ವನಿ ಮತದ ವೇಳೆ ಮಸೂದೆಯ ಪರ ಬಹುಮತ ಇದ್ದಿದ್ದರಿಂದ ಎನ್‌ಜೆಎಸಿ 2022 ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

ಎನ್‌ಜೆಎಸಿ ಮೂಲಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ನೇಮಿಸಲು ಅವಕಾಶ ನೀಡುವುದು ಇದರ ಉದ್ದೇಶ.

ಒಂದೊಮ್ಮೆ ಈ ಮಸೂದೆಗೆ ಒಪ್ಪಿಗೆ ದೊರೆತರೆ, ಆಯೋಗದ ಮೂಲಕ ನ್ಯಾಯಮೂರ್ತಿಗಳ ವರ್ಗಾವಣೆಯ ನಿಯಂತ್ರಣ ಹಾಗೂ ನ್ಯಾಯಮೂರ್ತಿಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಬಹುದಾ
ಗಿದೆ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧದ ದೂರಿನ ತನಿಖೆಯನ್ನು ನಿಯಂತ್ರಿಸಬಹುದಾಗಿದೆ. ರಾಷ್ಟ್ರಪತಿ ಅವರಿಗೆ ಸಂಸತ್ತು ಮಾಹಿತಿ ನೀಡುವ ಮೂಲಕ ನ್ಯಾಯಮೂರ್ತಿಗಳ ವಜಾ ಪ್ರಕ್ರಿಯೆ ಆರಂಭಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ.

ಚಡ್ಡಾ ವಿರೋಧ: ‘ರಾಷ್ಟ್ರೀಯ ನ್ಯಾಯಾಂಗ ಆಯೋಗದ ವಿಚಾರವು 1993, 1998 ಮತ್ತು 2016ರಲ್ಲಿ ಸುಪ್ರೀಂ ಕೋರ್ಟ್‌ನ ಪರಿಶೀಲನೆಗೆ ಒಳಪಟ್ಟಿತ್ತು. ನ್ಯಾಯಾಂಗದ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್‌ ಈ ಮೂರೂ ಬಾರಿಯೂ ಆಯೋಗದ ರಚನೆ ಪ್ರಸ್ತಾವವನ್ನು ವಜಾ ಮಾಡಿತ್ತು’ ಎಂದು ಆಮ್‌ ಆದ್ಮಿ ಪಕ್ಷದ ಸದಸ್ಯ ರಾಘವ್‌ ಚಡ್ಡಾ ಹೇಳಿದರು.

‘ಸಾಂವಿಧಾನಿಕವಾಗಿ ಸಾಧುವಲ್ಲದ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಉತ್ತಮವಾಗಿಯೇ ಕೆಲಸ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.