ADVERTISEMENT

ಖಾಸಗಿ ರೈಲಿಗೆ 160 ಕಿ.ಮೀ. ವೇಗ: ಭಾರತೀಯ ರೈಲ್ವೆ

ಆರಂಭದ ವೇಗ ತಾಸಿಗೆ 130 ಕಿ.ಮೀ.: ಪ್ರಯಾಣದ ಅವಧಿಯಲ್ಲಿ ಗಣನೀಯ ಕಡಿತ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 22:49 IST
Last Updated 13 ಆಗಸ್ಟ್ 2020, 22:49 IST
ತೇಜಸ್ ಖಾಸಗಿ ರೈಲು
ತೇಜಸ್ ಖಾಸಗಿ ರೈಲು   

ನವದೆಹಲಿ: ಖಾಸಗಿ ರೈಲುಗಳು ಆರಂಭದ ದಿನಗಳಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಓಡಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಪ್ರಯಾಣಿಕ ರೈಲುಗಳನ್ನು ಓಡಿಸಲು ಹಲವು ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಂದಿವೆ.

2023ರ ಮಾರ್ಚ್ ವೇಳೆಗೆ ಖಾಸಗಿ ರೈಲುಗಳನ್ನು ಹಳಿಗೆ ಇಳಿಸಲು ಇಲಾಖೆ ಉತ್ಸುಕವಾಗಿದೆ. ಮೊದಲ ವರ್ಷದಲ್ಲಿ ಅವು 130 ಕಿಲೋಮೀಟರ್ ವೇಗದಲ್ಲಿ ಓಡಲಿದ್ದು ಅದರ ಮುಂದಿನ ವರ್ಷದಲ್ಲಿ ಅವುಗಳ ವೇಗವನ್ನು 160 ಕಿಲೋಮೀಟರ್‌ಗೆ ಹೆಚ್ಚಿಸಲು ಇಲಾಖೆ ಚಿಂತನೆ ನಡೆಸಿದೆ.

ರೈಲುಗಳು ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಓಡುವಂತೆ ವಿನ್ಯಾಸ ಮಾಡಬೇಕು ಎಂದು ಖಾಸಗಿ ರೈಲುಗಳ ಕಾರ್ಯಾಚರಣೆ ಕುರಿತ ಕರಡು ಅಧಿಸೂಚನೆಯಲ್ಲಿ ರೈಲ್ವೆ ಇಲಾಖೆ ಸೂಚಿಸಿತ್ತು.

ADVERTISEMENT

‘ಖಾಸಗಿ ರೈಲುಗಳ ಕಾರ್ಯಾಚರಣೆ ಶುರುವಾದರೆ, ಪ್ರಯಾಣದ ಅವಧಿ ಈಗಿಗಿಂತ ಶೇ 30ರಷ್ಟು ಕಡಿತಗೊಳ್ಳಲಿದೆ.ಕೆಲವು ಮಾರ್ಗಗಳಲ್ಲಿ 160 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ಹಳಿಗಳನ್ನು ನವೀಕರಿಸುವುದು ಮತ್ತು ಸಿಗ್ನಲ್‌ ವ್ಯವಸ್ಥೆಯನ್ನು ಒಳಗೊಂಡಂತೆ ಮೂಲಸೌಕರ್ಯವನ್ನು ಸುಧಾರಿಸಲು ರೈಲ್ವೆ ಸಿದ್ಧತೆ ನಡೆಸುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸೈಡ್ಲಿಂಗ್ ಬಾಗಿಲು, ಪ್ರತಿ ಬೋಗಿಯಲ್ಲಿ ಕ್ಯಾಮೆರಾ, ರೈಲು ತಲುಪುವ ಸ್ಥಳ ಕುರಿತು ವಿವಿಧ ಭಾಷೆಗಳಲ್ಲಿ ಮಾಹಿತಿ ನೀಡುವ ಡಿಸ್‌ಪ್ಲೇ ವ್ಯವಸ್ಥೆ, ತುರ್ತು ಸಂದರ್ಭಗಳಲ್ಲಿ ರೈಲು ಚಾಲಕರು ಅಥವಾ ರಕ್ಷಕರ ಜೊತೆ ಮಾತನಾಡುವ ವ್ಯವಸ್ಥೆ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಖಾಸಗಿ ರೈಲುಗಳು ಒಳಗೊಂಡಿರಲಿವೆ.

ರೈಲುಗಳು ನಿಲ್ದಾಣ ತಲುಪುವುದು ವಿಳಂಬವಾದರೆ ಅಥವಾ ಬೇಗನೇ ನಿಲ್ದಾಣ ತಲುಪಿದರೆ ಖಾಸಗಿ ರೈಲು ಕಾರ್ಯಾಚರಣೆ ನಡೆಸುವವರು ಭಾರಿ ದಂಡ ತೆರಬೇಕಿದೆ. ಶೇ 95ರಷ್ಟು ಸಮಯಪ್ರಜ್ಞೆ ಕಾಯ್ದುಕೊಳ್ಳಲೇಬೇಕಿದೆ. 15 ನಿಮಿಷ ತಡವಾಗಿ ಅಥವಾ ಬೇಗನೇ ಬಂದರೆ ಅದು ವಿಳಂಬ ಎಂದು ಪರಿಗಣಿತವಾಗಲಿದೆ.ರೈಲುಗಳನ್ನು ಓಡಿಸಲು 23 ಖಾಸಗಿ ಕಂಪನಿಗಳು ಆಸಕ್ತಿ ತೋರಿಸಿವೆ. ಖಾಸಗಿ ರೈಲು ಸಂಚಾರಕ್ಕೆ 109 ಮಾರ್ಗಗಳನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.