ADVERTISEMENT

ಕೇಂದ್ರ ಸರ್ಕಾರದಿಂದ ನ್ಯಾಯಾಂಗದ ಮೇಲೆ ಒತ್ತಡ: ಪ್ರಿಯಾಂಕಾ ಗಾಂಧಿ ಆರೋಪ

ಪಿಟಿಐ
Published 30 ಮಾರ್ಚ್ 2024, 12:59 IST
Last Updated 30 ಮಾರ್ಚ್ 2024, 12:59 IST
ಪ್ರಿಯಾಂಕಾ ಗಾಂಧಿ 
ಪ್ರಿಯಾಂಕಾ ಗಾಂಧಿ    

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದ ಬಳಿಕ ಕೇಂದ್ರವು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ. ನ್ಯಾಯಾಂಗವು ಸ್ವತಂತ್ರ ಮತ್ತು ಬಲಿಷ್ಠವಾಗಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇಷ್ಟವಿಲ್ಲವೇ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

‘ಪಟ್ಟಭದ್ರ ಹಿತಾಸಕ್ತಿ ಗುಂಪು’ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ಅದರ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ‘ಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ’ ಎಂದು ಗುರುವಾರ ಪ್ರಧಾನಿ ಮೋದಿ, ಕಾಂಗ್ರೆಸ್‌ ಅನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರದ ವಿರುದ್ಧ ಪ್ರಿಯಾಂಕಾ ಹರಿಹಾಯ್ದಿದ್ದಾರೆ. 

‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಪ್ರಿಯಾಂಕಾ ‘ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಹಗರಣಗಳು ಹೊರಬರುತ್ತಿರುವುದನ್ನು ನೋಡಿ ಪತ್ರಗಳನ್ನು ಬರೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರಲಾಗುತ್ತಿದೆ. ಸ್ವತಃ ಪ್ರಧಾನಿಯೇ ನ್ಯಾಯಾಂಗದ ಕುರಿತು ನಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಇದರಲ್ಲಿ ಏನೋ ಅನುಮಾನವಿದೆ. ಮೋದಿ ಹೆದರಿದಂತೆ ತೋರುತ್ತಿದೆ’ ಎಂದಿದ್ದಾರೆ.

ADVERTISEMENT

‘ರಾಜಕೀಯ ಹಸ್ತಕ್ಷೇಪದಿಂದ ತೊಂದರೆಗೀಡಾದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸುದ್ದಿಗೋಷ್ಠಿ ನಡೆಸುವುದು, ನ್ಯಾಯಮೂರ್ತಿಯಾಗಿದ್ದವರನ್ನು ರಾಜ್ಯಸಭೆಗೆ ಕಳುಹಿಸುವುದು, ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು, ನ್ಯಾಯಮೂರ್ತಿಗಳ ನೇಮಕಾತಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವುದು, ತಮ್ಮ ವಿರುದ್ಧ ತೀರ್ಪು ಬಂದಾಗ ನ್ಯಾಯಾಂಗದ ಕುರಿತು ಹೇಳಿಕೆ ನೀಡುವುದು ಇತ್ಯಾದಿಗಳನ್ನು ಗಮನಿಸಿದರೆ ನ್ಯಾಯಾಂಗವು ಸ್ವತಂತ್ರ ಮತ್ತು ಬಲಿಷ್ಠವಾಗಿರುವುದು ಸರ್ಕಾರಕ್ಕೆ ಇಷ್ಟವಿಲ್ಲ‘ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.