ADVERTISEMENT

ಐದು ವರ್ಷಗಳ ಯೋಜನೆ ಬಗ್ಗೆ ಹೇಳಿ: ಪ್ರಿಯಾಂಕಾ ಗಾಂಧಿ

ಹಳೆ ಆರೋಪಗಳಿಂದ ಉಪಯೋಗವಿಲ್ಲ ಅಸ್ಸಾಂ ಸಿ.ಎಂ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 16:06 IST
Last Updated 20 ಫೆಬ್ರುವರಿ 2026, 16:06 IST
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಅಸ್ಸಾಂ ಸ್ಕ್ರೀನಿಂಗ್‌ ಸಮಿತಿ ಅಧ್ಯಕ್ಷೆಯೂ ಆದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಗುವಾಹಟಿಯಲ್ಲಿ ಪಕ್ಷದ ನಾಯಕರ ಜತೆಗೆ ಮಾತುಕತೆ ನಡೆಸಿದರು –ಪಿಟಿಐ ಚಿತ್ರ 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಅಸ್ಸಾಂ ಸ್ಕ್ರೀನಿಂಗ್‌ ಸಮಿತಿ ಅಧ್ಯಕ್ಷೆಯೂ ಆದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಗುವಾಹಟಿಯಲ್ಲಿ ಪಕ್ಷದ ನಾಯಕರ ಜತೆಗೆ ಮಾತುಕತೆ ನಡೆಸಿದರು –ಪಿಟಿಐ ಚಿತ್ರ    

ಗುವಾಹಟಿ: ‘ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಂದಿನ ಐದು ವರ್ಷಗಳಲ್ಲಿ ಒದಗಿಸಬಹುದಾದ ಉದ್ಯೋಗ, ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಬೇಕೇ ಹೊರತು, 10 ವರ್ಷಗಳ ಹಿಂದೆ ಕಾಂಗ್ರೆಸ್‌ನಲ್ಲಿ ತನಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಆರೋಪಗಳನ್ನು ಮಾಡಿದರೆ ಏನೂ ಉಪಯೋಗವಿಲ್ಲ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಟೀಕಿಸಿದರು. 

ಅಸ್ಸಾಂ ಸರ್ಕಾರದಲ್ಲಿನ ಭ್ರಷ್ಟಾಚಾರ, ಒಂದು ಕುಟುಂಬದಲ್ಲಿ ಸಂಪತ್ತಿನ ಕೇಂದ್ರೀಕರಣ, ರಾಜ್ಯ ಆಸ್ತಿಗಳನ್ನು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುತ್ತಿರುವ ವಿಚಾರಗಳ ಕುರಿತು ಶರ್ಮಾ ಅವರನ್ನು ಗುರಿಯಾಗಿಸಿ ಮಾತನಾಡಿದ ಪ್ರಿಯಾಂಕಾ ಅವರು, ಬದಲಾವಣೆಯ ಸಮಯ ಬಂದಿದೆ ಎಂಬುದನ್ನು ಅಸ್ಸಾಂನ ಜನರು ಅರಿತುಕೊಂಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.  

‘ರಾಜಕೀಯದಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ಕೆಲವು ಪರವಾಗಿರಬಹುದು, ಇನ್ನೂ ಕೆಲವು ವಿರುದ್ಧವಾಗಿರಬಹುದು. ಅವುಗಳನ್ನು ಸಹಿಸಿಕೊಂಡು ಸಾಗಬೇಕು. ಆದರೆ ಶರ್ಮಾ ಅವರು ಇನ್ನೂ 10 ವರ್ಷಗಳ ಹಿಂದಿನ ವಿಷಯದ ಬಗ್ಗೆಯೇ ಅಳುತಿದ್ದರೆ ನಾನೇನು ಹೇಳಲಿ’ ಎಂದು ಅವರು ಪ್ರಶ್ನಿಸಿದರು. 

ADVERTISEMENT

ಇತ್ತೀಚೆಗೆ ಮಾತನಾಡಿದ್ದ ಶರ್ಮಾ ಅವರು, ‘ನಾನು ಕಾಂಗ್ರೆಸ್‌ನಲ್ಲಿದ್ದಾಗ 2014ರಲ್ಲಿ ಪಕ್ಷದ  58 ಶಾಸಕರು ನನ್ನನ್ನು ಬೆಂಬಲಿಸಿದ್ದರು. ಆಗಿನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿಪಡಿಸುವಂತೆ ಸೂಚಿಸಿದ್ದರು. ಆದರೆ ಅಮೆರಿಕದಲ್ಲಿದ್ದ ರಾಹುಲ್‌ ಗಾಂಧಿ ಅವರು ಪಕ್ಷದ ನಾಯಕರಿಗೆ ಫೋನ್‌ ಮಾಡಿದ ಬಳಿಕ ಪರಿಸ್ಥಿತಿ ಬದಲಾಯಿತು’ ಎಂದು ಹೇಳಿದ್ದರು. ಅದಕ್ಕೆ ಪ್ರಿಯಾಂಕಾ ಪ್ರತಿಕ್ರಿಯಿಸಿದರು.  

‘ಯುವ ಸಮುದಾಯ ಮತ್ತು ಮಹಿಳೆಯರು ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದಾರೆ. ಇದೇ ವೇಳೆ ಅಸ್ಸಾಂನ ಆಸ್ತಿಗಳನ್ನು ಒಂದು ಕುಟುಂಬ ಮತ್ತು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲಾಗುತ್ತಿರುವುದನ್ನು ಜನರು ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಅವರು ವಾದ್ರಾ ಹೇಳಿದರು. 

ಶರ್ಮಾ 2015ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. 2016ರಲ್ಲಿ ಅಸ್ಸಾಂನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.  

ಜುಬೀನ್‌ ಅಸ್ಸಾಂನ ಆತ್ಮದ ಧ್ವನಿ

ಗಾಯಕ ಜುಬೀನ್‌ ಗರ್ಗ್‌ ಅವರ ಸಮಾಧಿ ಸ್ಥಳಕ್ಕೆ ಶುಕ್ರವಾರ ತೆರಳಿದ ಪ್ರಿಯಾಂಕಾ ನಮಿಸಿ ಗೌರವ ಸಲ್ಲಿಸಿದರು. ‘ಗರ್ಗ್ ಅವರು ಅಸ್ಸಾಂನ ಆತ್ಮದ ಧ್ವನಿಯಾಗಿದ್ದರು. ಅವರು ರಾಜಕೀಯಕ್ಕಿಂತ ಉತ್ತುಂಗದಲ್ಲಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸಿದರು. 

ಪಾಕಿಸ್ತಾನದ ಜತೆ ಸಂಬಂಧ ಕಲ್ಪಿಸಿ ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌ ಅವರ ಪತ್ನಿ ಮತ್ತು ಮಕ್ಕಳ ವಿರುದ್ಧ ಆರೋಪಿಸುವುದು ಸರಿಯಾದ ರಾಜಕಾರಣವಲ್ಲ

-ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್‌ ಸಂಸದೆ

‘ಹೆಚ್ಚು ಪ್ರಕರಣಗಳು ಗೌರವದ ಸಂಕೇತ’

ಗುವಾಹಟಿ: ‘ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಎದುರಿಸುವುದು ಗೌರವದ ಸಂಕೇತವಾಗಿ ಮಾರ್ಪಟ್ಟಿದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ವ್ಯಂಗ್ಯವಾಡಿದರು.  ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧದ 2018ರ ಮಾನನಷ್ಟ ಮೊಕದ್ದಮೆ ಕುರಿತು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ವಿವಿಧ ಸಂಸ್ಥೆಗಳು ರಾಹುಲ್‌ ಅವರನ್ನು ಗುರಿಯಾಗಿಸಿ ಹಲವು ಪ್ರಕರಣಗಳನ್ನು ದಾಖಲಿಸಿರುವುದನ್ನು ಗಮನಿಸಿದರೆ ರಾಹುಲ್‌ ಸರಿಯಾದ ಹಾದಿಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಉತ್ತರಿಸಿದರು.  ‘ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಜನರನ್ನು ಶೋಷಿಸುವ ರೀತಿಯಲ್ಲಿ ರಾಜಕೀಯ ನಡೆಯುತ್ತಿದೆ. ಇದನ್ನು ನಾವು ಹಲವು ವರ್ಷಗಳಿಂದ ಸಹಿಸಿಕೊಳ್ಳುತ್ತಿದ್ದೇವೆ’ ಎಂದು ಅವರು ಹೇಳಿದರು.     ಅಭಿವೃದ್ಧಿ ಮತ್ತು ಜನಪರ ನಿಲ್ಲುವವರು ಸಕಾರಾತ್ಮಕ ರಾಜಕೀಯ ಬಯಸುವವರು ಸರ್ಕಾರದಿಂದ ಹೆಚ್ಚಿನ ದಾಳಿಗಳಿಗೆ ಒಳಗಾಗುತ್ತಾರೆ ಎಂಬುದನ್ನು ಈ ಪ್ರಕರಣಗಳಿಂದ ತಿಳಿದು ಬರುತ್ತವೆ ಎಂದು ಅವರು ತಿಳಿಸಿದರು.  

ಅಭ್ಯರ್ಥಿ ಆಯ್ಕೆ ಕಸರತ್ತು: ಸಭೆ ಮುಕ್ತಾಯ

ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಹಿರಿಯ ಕಾರ್ಯಕರ್ತರ ಜತೆ ಸ್ಕ್ರೀನಿಂಗ್‌ ಸಮಿತಿ ಅಧ್ಯಕ್ಷೆಯೂ ಆದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಎರಡು ದಿನಗಳಿಂದ ನಡೆಸುತ್ತಿದ್ದ ಸರಣಿ ಸಭೆಗಳು ಶುಕ್ರವಾರ ಕೊನೆಗೊಂಡವು.   ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರು ಶಾಸಕರು ಜಿಲ್ಲಾ ಘಟಕಗಳ ಅಧ್ಯಕ್ಷರು ವಿವಿಧ ಸಂಘಟನೆಗಳ ಮುಖ್ಯಸ್ಥರು ಶಾಸಕಾಂಗ ಪಕ್ಷದ ನಾಯಕರು ಸಂಸದರು ಬೂತ್‌ ಮಟ್ಟದ ಸಮಿತಿ ಮುಖ್ಯಸ್ಥರ ಜತೆ ಅವರು ಪ್ರತ್ಯೇಕ ಸಭೆಗಳನ್ನು ನಡೆಸಿ ಪ್ರತಿಕ್ರಿಯೆ ಸಂಗ್ರಹಿಸಿದರು.     ‘ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದ್ದೇನೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೊಮ್ಮೆ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ’ ಪ್ರಿಯಾಂಕಾ ಸುದ್ದಿಗಾರರಿಗೆ ತಿಳಿಸಿದರು.   ಈ ತಿಂಗಳ ಅಂತ್ಯದ ವೇಳೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆಯಿದೆ ಎಂದು ರಾಜ್ಯ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗೌರವ್‌ ಗೊಗೊಯ್‌ ಇತ್ತೀಚೆಗಷ್ಟೇ ತಿಳಿಸಿದ್ದರು.

ಗಡಿಗಳನ್ನು ತೆರೆದಿಟ್ಟಿದ್ದ ಕಾಂಗ್ರೆಸ್‌: ಅಮಿತ್‌ ಶಾ

ನಾಥನ್‌ಪುರ (ಅಸ್ಸಾಂ): ‘ಕಾಂಗ್ರೆಸ್‌ ಪಕ್ಷವು ದೇಶದ ಗಡಿಗಳನ್ನು ತೆರೆದಿಟ್ಟಿತ್ತು. ಇದರಿಂದಾಗಿ ಅಸ್ಸಾಂ ಒಳಗೆ ನುಳುಸುಕೋರರು ಪ್ರವೇಶಿಸಿದರು’ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಶುಕ್ರವಾರ ಆರೋಪಿಸಿದರು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಮಟ್ಟಹಾಕುತ್ತಿದೆ ಎಂದು ಹೇಳಿದರು. ಕಛಾರ್‌ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಆಳ್ವಿಕೆ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರಲಿಲ್ಲ. ಆದರೆ ಈಗ ನಿತ್ಯವೂ 14 ಕಿ.ಮೀ. ರಸ್ತೆ ನಿರ್ಮಾಣವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.