ADVERTISEMENT

ತಂತ್ರಾಂಶ ಬಳಸಿ ಬೇಹುಗಾರಿಕೆ: ಪ್ರಿಯಾಂಕಾ ಗಾಂಧಿ ಮೊಬೈಲ್‌ಗೂ ಪೆಗಾಸಸ್‌ ‘ಕನ್ನ’

ರಾಜಕೀಯ ಮುಖಂಡರ ಮಾಹಿತಿ ಕಳವು?

ಪಿಟಿಐ
Published 3 ನವೆಂಬರ್ 2019, 20:08 IST
Last Updated 3 ನವೆಂಬರ್ 2019, 20:08 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೊಬೈಲ್‌ ಹ್ಯಾಕ್‌ (ಗೂಢಚರ್ಯೆ ತಂತ್ರಾಂಶ ಪೆಗಾಸಸ್‌ ನುಸುಳುವಿಕೆ) ಆಗಿರುವ ಶಂಕೆ ಇದೆ ಎಂಬ ಸಂದೇಶ ಅವರಿಗೆ ವಾಟ್ಸ್‌ಆ್ಯಪ್‌ನಿಂದ ಬಂದಿತ್ತು ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

ಪ್ರಿಯಾಂಕಾ ಅವರಿಗೆ ಈ ಸಂದೇಶ ಯಾವಾಗ ಬಂದಿತ್ತು ಎಂಬ ಮಾಹಿತಿಯನ್ನು ಸುರ್ಜೇವಾಲ ಅವರು ನೀಡಿಲ್ಲ.

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿರುವ ಪೆಗಾಸಸ್‌ ಎಂಬ ಗೂಢಚರ್ಯೆ ತಂತ್ರಾಂಶ ಬಳಸಿ ಜಗತ್ತಿನಾ ದ್ಯಂತ ಸುಮಾರು 1,400 ಜನರ ಮೊಬೈಲ್‌ ಮೇಲೆ ನಿಗಾ ಇರಿಸಲಾಗಿತ್ತು ಎಂಬ ವಿಚಾರವನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ಕಳೆದ ವಾರ ಬಹಿರಂಗಪಡಿಸಿತ್ತು. ಗೂಢಚರ್ಯೆಗೆ ಒಳಗಾದವರಲ್ಲಿ ಭಾರತದ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಮತ್ತು ವಕೀಲರು ಸೇರಿದ್ದಾರೆ ಎಂದೂ ತಿಳಿಸಿತ್ತು.

ADVERTISEMENT

ಪೆಗಾಸಸ್‌ ತಂತ್ರಾಂಶವು ಅಳವಡಿಕೆಯಾದ ಶಂಕೆ ಇರುವ ಮೊಬೈಲ್‌ ಬಳಕೆದಾರರಿಗೆ ನೇರವಾಗಿ ಮಾಹಿತಿ ನೀಡಲಾಗಿದೆ ಎಂದು ವಾಟ್ಸ್‌ಆ್ಯಪ್‌ ಸಂಸ್ಥೆ ತಿಳಿಸಿತ್ತು. ಬಳಿಕ, ವಾಟ್ಸ್‌ಆ್ಯಪ್‌ನಿಂದ ತಮಗೆ ಇಂತಹ ಕರೆ ಬಂದಿತ್ತು ಎಂದು ಹಲವು ವ್ಯಕ್ತಿಗಳು ಹೇಳಿಕೊಂಡಿದ್ದಾರೆ.

ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಇಂತಹ ಕರೆ ಬಂದಿತ್ತು ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುರ್ಜೇವಾಲ ಅವರು, ಪ್ರಿಯಾಂಕಾ ಅವರಿಗೂ ಕರೆ ಬಂದಿರುವ ಮಾಹಿತಿ ನೀಡಿದ್ದಾರೆ.

ಸರ್ಕಾರವು ‘ಪಿತೂರಿಕಾರಕ ಮೌನ’ವನ್ನು ಅನುಸರಿಸುತ್ತಿದೆ. ಮೂಲಗಳ ಮೂಲಕ ಮಾಹಿತಿ ನೀಡಿ ಮಾಧ್ಯಮದಲ್ಲಿ ವಿವಿಧ ರೀತಿಯ ಸುದ್ದಿಗಳು ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದೆ. ಭಾರತದಲ್ಲಿ ಜನರಿಗೆ ಖಾಸಗಿತನದ ಹಕ್ಕು ಇದೆಯೇ ಎಂಬುದು ಇಲ್ಲಿನ ಪ್ರಶ್ನೆ ಎಂದು ಅವರು ಹೇಳಿದ್ದಾರೆ.

ಮೇ ತಿಂಗಳಲ್ಲೇ ಕೇಂದ್ರ ಸರ್ಕಾರಕ್ಕೆ ಮಾಹಿತಿ: ವಾಟ್ಸ್‌ಆ್ಯಪ್‌
ಬೇಹುಗಾರಿಕೆ ಶಂಕೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಮೇ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ನೀಡಲಾಗಿತ್ತು ಎಂದು ವಾಟ್ಸ್‌ಆ್ಯಪ್‌ ಸಂಸ್ಥೆ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ಸೈಬರ್‌ ಸುರಕ್ಷತೆ ವಿಭಾಗ ಸಿಇಆರ್‌ಟಿ–ಇನ್‌ಗೆ ಮೇಯಲ್ಲಿ ಬೇಹುಗಾರಿಗೆ ಶಂಕೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ 121 ವ್ಯಕ್ತಿಗಳ ಮೇಲೆ ನಿಗಾ ಇರಿಸಿರುವ ಅನುಮಾನ ಇದೆ ಎಂಬ ಮಾಹಿತಿಯನ್ನು ಸೆಪ್ಟೆಂಬರ್‌ನಲ್ಲಿ ನೀಡಲಾಗಿತ್ತು ಎಂದು ವಾಟ್ಸ್‌ಆ್ಯಪ್‌ ಹೇಳಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ, ಭಾರತದಲ್ಲಿ ಕೆಲಸ ಕಾರ್ಯನಿರ್ವಹಿಸುವ ಜಾಲಗಳು ಅಥವಾ ಭಾರತೀಯ ಬಳಕೆದಾರರ ಮೇಲೆ ಸೈಬರ್‌ ದಾಳಿ ನಡೆದರೆ ಈ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು.

ಆದರೆ, ಈ ಮಾಹಿತಿ ಅಸಮರ್ಪಕ ಮತ್ತು ಅಪೂರ್ಣ ವಾಗಿತ್ತು. ಈ ಬಗ್ಗೆ ಕೇಳಲಾದ ಪ್ರಶ್ನೆಗಳಿಗೂ ಸಂಸ್ಥೆಯು ಉತ್ತರಿಸಿರಲಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಪೆಗಾಸಸ್‌ ಮೂಲಕ ಬೇಹುಗಾರಿಕೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವಾಟ್ಸ್‌ಆ್ಯಪ್‌ಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ವಾಟ್ಸ್‌ಆ್ಯಪ್‌ ಹೇಳಿದೆ. ವರದಿಯನ್ನು ಪರಿಶೀಲಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಡಿಜಿಟಲ್‌ ಪಾವತಿಗೆ ಹಿನ್ನಡೆ?: ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆಯನ್ನು ಆರಂಭಿಸುವ ಯೋಜನೆಯನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ಹೊಂದಿದೆ. ಪಾವತಿಸೇವೆ ಆರಂಭಿಸಬೇಕಿದ್ದರೆ ‘ಲೋಪರಹಿತ’ ವ್ಯವಸ್ಥೆಯನ್ನು ಹೊಂದಿರಬೇಕು. ಹಾಗಾಗಿ, ಈಗಿನ ಬೇಹುಗಾರಿಕೆ ಪ್ರಕರಣವು ವಾಟ್ಸ್‌ಆ್ಯಪ್‌ ಚಿಂತೆಗೆ ಕಾರಣವಾಗಿದೆ.

ಪಾವತಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ನಿಯಂತ್ರಣ ಸಂಸ್ಥೆಗಳ ಅನುಮೋದನೆ ದೊರೆತರೆ ಈ ಸೇವೆ ಕಾರ್ಯರೂಪಕ್ಕೆ ಬರಲಿದೆ. ಫೋನ್‌ಪೇ, ಪೇಟಿಎಂ ಮತ್ತು ಗೂಗಲ್‌ ಪೇಯಂತಹ ಸೇವೆಗಳಿಗೆ ಇದು ಸ್ಪರ್ಧೆ ಒಡ್ಡಬಹುದು.

**
ಭಾರತೀಯ ಜಾಸೂಸ್ (ಬೇಹುಗಾರಿಕೆ) ಪಕ್ಷ ಎಂಬುದು ಬಿಜೆಪಿಯ ಹೊಸ ಹೆಸರು. ಅಕ್ರಮ, ಅಸಾಂವಿಧಾನಿಕ ಗೂಢಚರ್ಯೆ ಜಾಲವನ್ನು ಬಿಜೆಪಿ ನಡೆಸುತ್ತಿದೆ.
-ರಣದೀಪ್‌ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.