ADVERTISEMENT

ಮತದಾರರ ಅಧಿಕಾರ ಯಾತ್ರೆ: ರಾಹುಲ್ ಜೊತೆ ಸೇರಿಕೊಂಡ ಪ್ರಿಯಾಂಕಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:23 IST
Last Updated 26 ಆಗಸ್ಟ್ 2025, 6:23 IST
   

Priyanka Gandhi Vadra joins Rahul in 'Voter Adhikar Yatra' in Bihar's Supaul

ಸುಪೌಲ್(ಬಿಹಾರ): ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಮತದಾರರ ಅಧಿಕಾರ ಯಾತ್ರೆಗೆ ಬಿಹಾರದ ಸುಪೌಲ್‌ನಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿಕೊಂಡಿದ್ದಾರೆ.

ಪ್ರಿಯಾಂಕಾ, ರಾಹುಲ್ ಜೊತೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಇಂಡಿಯಾ ಬಣದ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅಪಾರ ಜನಸ್ತೋಮಕ್ಕೆ ಕೈಬೀಸುತ್ತಾ ಯಾತ್ರೆ ನಡೆಸಿದ್ದಾರೆ. ಒಂದು ದಿನದ ವಿರಾಮದ ಬಳಿಕ ಮಂಗಳವಾರ ಯಾತ್ರೆ ಪುನರಾರಂಭಗೊಂಡಿದೆ.

ADVERTISEMENT

ಭಾನುವಾರ ಅರಾರಿಯಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಮುಂಬರುವ ವಿಧಾನಸಭಾ ಚುನಾವಣೆಗೆ ಬಿಹಾರದ ಇಂಡಿಯಾ ಬಣದ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಫಲಿತಾಂಶಗಳು ಫಲಪ್ರದವಾಗಿರುತ್ತವದೆ ಎಂದು ಪ್ರತಿಪಾದಿಸಿದ್ದರು.

‘ಬಿಹಾರ ವಿಧಾನಸಭಾ ಚುನಾವಣೆಗೆ ಇಂಡಿಯಾ ಬಣವು ಶೀಘ್ರದಲ್ಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ನಾವು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಹೊಂದಿಕೊಂಡಿದ್ದೇವೆ. ಪರಸ್ಪರ ಗೌರವಿಸುತ್ತೇವೆ. ಫಲಿತಾಂಶ ಫಲಪ್ರದವಾಗಿರುತ್ತದೆ’ಎಂದು ಗಾಂಧಿ ಹೇಳಿದ್ದರು.

ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಅವರು, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯು ಬಿಜೆಪಿಗೆ ಸಹಾಯ ಮಾಡಲು ಮತಗಳನ್ನು ಕದಿಯಲು ಚುನಾವಣಾ ಆಯೋಗದ ಸಾಂಸ್ಥಿಕ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.

ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಗಾಂಧಿ, ಇಂಡಿಯಾ ಬಣದ ಎಲ್ಲ ಪಕ್ಷಗಳ ಬೆಂಬಲದೊಂದಿಗೆ 'ಮತದಾರ ಅಧಿಕಾರ ಯಾತ್ರೆ'ಯನ್ನು ಪ್ರಾರಂಭಿಸಿದ್ದಾರೆ.

ಆಗಸ್ಟ್ 17ರಂದು ಆರಂಭವಾಗಿರುವ ಯಾತ್ರೆ ಸೆಪ್ಟೆಂಬರ್ 1ರಂದು ಪಟ್ನಾದಲ್ಲಿ ಸಮಾರೋಪಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.