ADVERTISEMENT

ಡ್ಯಾನಿಶ್‌ ಅಲಿ ನಿಂದನೆ | ಬಿಧೂಢಿ ವಿರುದ್ಧ ಕ್ರಮ: ಸ್ಪೀಕರ್‌ಗೆ ವಿಪಕ್ಷಗಳ ಒತ್ತಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 15:47 IST
Last Updated 23 ಸೆಪ್ಟೆಂಬರ್ 2023, 15:47 IST
<div class="paragraphs"><p>ಬಿಜೆಪಿ ಸಂಸದ ರಮೇಶ್‌ ಬಿಧೂಢಿ ಹಾಗೂ&nbsp;ಬಿಎಸ್‌ಪಿ ಸಂಸದ ಡ್ಯಾನಿಷ್‌ ಅಲಿ (ಬಲ)</p></div>

ಬಿಜೆಪಿ ಸಂಸದ ರಮೇಶ್‌ ಬಿಧೂಢಿ ಹಾಗೂ ಬಿಎಸ್‌ಪಿ ಸಂಸದ ಡ್ಯಾನಿಷ್‌ ಅಲಿ (ಬಲ)

   

ಪಿಟಿಐ ಚಿತ್ರ

ನವದೆಹಲಿ: ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಕುರಿತು ಸದನದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿಯ ರಮೇಶ್ ಬಿಧೂಢಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕರು ಶನಿವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮೇಲೆ ಒತ್ತಡ ಹೇರಿದ್ದಾರೆ.

ADVERTISEMENT

ಬಿಧೂಢಿ ಹೇಳಿಕೆಯಿಂದ ಬಿಜೆಪಿ ಟೀಕೆಗೆ ಗುರಿಯಾಗುತ್ತಿದ್ದಂತೆ, ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ಸದನದಲ್ಲಿ ಅಲಿ ಅವರ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಸದಸ್ಯರು ನೀಡಿದ ಹೇಳಿಕೆಗಳನ್ನು ಪರಿಶೀಲಿಸಲು ವಿಚಾರಣಾ ಸಮಿತಿ ರಚಿಸುವಂತೆ ಸ್ಪೀಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  

ಬಿಧೂಢಿ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಖಂಡಿಸಲಾಗುವುದು. ಯಾವುದೇ ನಾಗರಿಕ ಸಮಾಜವು ಅಂತಹ ಹೇಳಿಕೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಅಲಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಇದು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿದೆ ಎಂದು ದುಬೆ ಆರೋಪಿಸಿದ್ದಾರೆ.

ಅಲಿ ಅವರ ಅಸಭ್ಯ ವರ್ತನೆ ಮತ್ತು ಹೇಳಿಕೆಗಳ ಬಗ್ಗೆಯೂ ಸ್ಪೀಕರ್ ತನಿಖೆ ನಡೆಸಬೇಕು. ನಿಯಮಗಳ ಪ್ರಕಾರ, ಇನ್ನೊಬ್ಬ ಸಂಸದರಿಗೆ ನಿಗದಿಪಡಿಸಿದ ಸಮಯದಲ್ಲಿ ಅಡ್ಡಿಪಡಿಸುವುದು, ಕುಳಿತು ಮಾತನಾಡುವುದು ಮತ್ತು ರನ್ನಿಂಗ್ ಕಾಮೆಂಟರಿ ನೀಡುವುದು ಸಹ ಶಿಕ್ಷೆಗೆ ಅರ್ಹ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ವಿರೋಧ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಧೂಢಿ ಹೇಳಿಕೆಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿದ್ದಾರೆ.

‘ಏಳು ಸ್ಟಾರ್ ಕಟ್ಟಡ’ದ ಸಂಸತ್ತಿನಲ್ಲಿ ‘ದ್ವೇಷ’ದ ಹೊಸ ಸಂಸ್ಕೃತಿ ಉದ್ಘಾಟಿಸಲಾಗಿದೆ ಎಂದಿದ್ದಾರೆ. 

ಬಿಧೂಢಿ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಎಆರ್‌ಎಸ್‌ನ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಸಹ ಸ್ಪೀಕರ್ ಅವರನ್ನು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.