ADVERTISEMENT

ಆರ್‌ಟಿಐ: ವಿವಾದಾತ್ಮಕ ತಿದ್ದುಪಡಿಗೆ ಅಂಗೀಕಾರ

ಮಾಹಿತಿ ಆಯುಕ್ತರ ಅವಧಿ, ವೇತನ ನಿರ್ಧರಿಸುವ ಹಕ್ಕು ಕೇಂದ್ರ ಸರ್ಕಾರಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 20:10 IST
Last Updated 25 ಜುಲೈ 2019, 20:10 IST
   

ನವದೆಹಲಿ: ಮಾಹಿತಿ ಹಕ್ಕು (ಆರ್‌ಟಿಐ) (ತಿದ್ದುಪಡಿ) ಮಸೂದೆ 2019ಕ್ಕೆ ರಾಜ್ಯಸಭೆ ಗುರುವಾರ ಒಪ್ಪಿಗೆ ಕೊಟ್ಟಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಗಳ ಎಲ್ಲ ಸದಸ್ಯರ ಸಭಾತ್ಯಾಗದ ಬಳಿಕ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ಅಂಗೀಕಾರ ಕೊಡಲಾಯಿತು.

ಕೇಂದ್ರ ಮತ್ತು ರಾಜ್ಯ ಮಟ್ಟದ ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನವನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದು ತಿದ್ದುಪಡಿ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈ ಮಸೂದೆಗೆ ಇದೇ 22ರಂದು ಲೋಕಸಭೆ ಒಪ್ಪಿಗೆ ಕೊಟ್ಟಿತ್ತು.

ಮಸೂದೆಯನ್ನು ಸಂಸತ್ತಿನ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ಟಿಎಂಸಿಯ ಡೆರೆಕ್‌ ಒಬ್ರಯಾನ್‌, ಸಿಪಿಐನ ಬಿನೋಯ್‌ ವಿಶ್ವಂ, ಸಿಪಿಎಂನ ಕೆ.ಕೆ. ರಾಜೇಶ್‌ ಮತ್ತು ಎಲಮರಂ ಕರೀಮ್‌ ಹಾಗೂ ಕಾಂಗ್ರೆಸ್‌ನ ರಾಜೀವ್‌ ಗೌಡ ಅವರು ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ನಿಲುವಳಿ ಮಂಡಿಸಿದ್ದರು. ಆದರೆ, ಈ ನಿಲುವಳಿಗೆ ಸೋಲಾಯಿತು. ಹಾಗಾಗಿ ಮಸೂದೆಯ ಅಂಗೀಕಾರ ಸುಲಭವಾಯಿತು.

ADVERTISEMENT

ನಿಲುವಳಿಯ ಪರ ವಿರೋಧ ಪಕ್ಷಗಳಿಗೆ ಒಟ್ಟುಗೂಡಿಸಲು ಸಾಧ್ಯವಾದದ್ದು 75 ಮತಗಳನ್ನು ಮಾತ್ರ. ನಿಲುವಳಿ ವಿರುದ್ಧ 117 ಮತಗಳು ದಾಖಲಾದವು. ಟಿಆರ್‌ಎಸ್‌, ಬಿಜೆಡಿ ಸದಸ್ಯರು ವಿರುದ್ಧವಾಗಿ ಮತ ಹಾಕಿದರು.

ಮತಪತ್ರದ ಮೂಲಕ ಈ ಮತದಾನ ನಡೆಯಿತು. ಮತಗಳ ಎಣಿಕೆ ನಡೆಯುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು. ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಕತ್ತು ಹಿಸುಕಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ನಿಮಿಷಗಳ ಬಳಿಕ ಅವರೆಲ್ಲರೂ ಸಭಾತ್ಯಾಗ ಮಾಡಿದರು. ನಂತರ, ಧ್ವನಿಮತದಿಂದ ಮಸೂದೆ ಅಂಗೀಕಾರವಾಯಿತು.

ಇದಕ್ಕೂ ಮೊದಲು, ಆರ್‌ಟಿಐಗೆ ಪ್ರಸ್ತಾಪಿಸಿರುವ ತಿದ್ದುಪಡಿಯು ಮಾಹಿತಿ ಆಯುಕ್ತರ ಸ್ವಾತಂತ್ರ್ಯವನ್ನು ಮೊಟಕು ಮಾಡುತ್ತದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಭಾರಿ ಗದ್ದಲ ಎಬ್ಬಿಸಿದವು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಣ ತೀವ್ರ ವಾಕ್ಸಮರ ಮತ್ತು ಕೋಲಾಹಲದಿಂದಾಗಿ ನಾಲ್ಕು ಬಾರಿ ಸದನವನ್ನು ಮುಂದೂಡಲಾಗಿತ್ತು.

ನೋಟು ರದ್ದತಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗೆಗಿನ ಮಾಹಿತಿಯು ಆರ್‌ಟಿಐ ಮೂಲಕ ಬಹಿರಂಗವಾಗಿದ್ದಕ್ಕೆ ಮೋದಿ ಅವರು ಈ ರೀತಿಯಲ್ಲಿ ಪ್ರತೀಕಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಹೇಳಿದರು. ಒಟ್ಟು ಐದು ಪ್ರಕರಣಗಳಲ್ಲಿ ಸರ್ಕಾರಕ್ಕೆ ಮುಜುಗರವಾಗಿತ್ತು. ನಕಲಿ ಪಡಿತರ ಚೀಟಿಗಳ ಸಂಖ್ಯೆ, ವಿದೇಶದಿಂದ ತಂದ ಕಪ್ಪುಹಣದ ಪ್ರಮಾಣದ ಮಾಹಿತಿ ಮತ್ತು ಸುಸ್ತಿದಾರರ ಪಟ್ಟಿ ಸಲ್ಲಿಕೆಯ ಮಾಹಿತಿಯು ಈ ಕಾಯ್ದೆಯ ಕಾರಣಕ್ಕೇ ಜನರಿಗೆ ತಿಳಿಯಿತು ಎಂದು ಜೈರಾಂ ಅವರು ಪ್ರತಿಪಾದಿಸಿದರು.

ಮಾಹಿತಿ ಆಯುಕ್ತರ ಕೆಲಸದಲ್ಲಿ ಕೇಂದ್ರ ಮಧ್ಯಪ್ರವೇಶ ನಡೆಸುವುದಿಲ್ಲ ಎಂಬ ಭರವಸೆಯನ್ನು ಪ್ರಧಾನಿ ಕಾರ್ಯಾಲಯದಲ್ಲಿ ರಾಜ್ಯ ಸಚಿವರಾಗಿ
ರುವ ಜಿತೇಂದ್ರ ಸಿಂಗ್‌ನೀಡಿದರು. ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗದ ಸ್ವಾಯತ್ತೆ ಮುಂದುವರಿಯಲಿದೆ ಎಂದೂ ಹೇಳಿದರು.

ಸಂಸತ್ ಅಧಿವೇಶನ ವಿಸ್ತರಣೆ

‘ಸಂಸತ್ ಅಧಿವೇಶನವನ್ನು ಆಗಸ್ಟ್ 7ರವರೆಗೆ ವಿಸ್ತರಿಸಲಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಲೋಕಸಭೆಯಲ್ಲಿ ಗುರುವಾರ ತಿಳಿಸಿದರು. ಪೂರ್ವನಿಗದಿಯಂತೆ ಶುಕ್ರವಾರ (ಜುಲೈ 26) ಸಂಸತ್ ಅಧಿವೇಶನ ಕೊನೆಗೊಳ್ಳಬೇಕಿತ್ತು. ಅಧಿವೇಶನವನ್ನು ವಿಸ್ತರಿಸುವ ಬಗ್ಗೆ ಸರ್ಕಾರವು ಬುಧವಾರವೇ ಚಿಂತನೆ ನಡೆಸಿತ್ತು.

‘ಗುರುವಾರ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಅಧಿವೇಶನ ವಿಸ್ತರಣೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೆಚ್ಚು ದಿನಗಳ ಕಾಲ ಕಲಾಪ ನಡೆಯಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಲೇ ಇದ್ದವು. ಸರ್ಕಾರ ಈಗ ಆ ಕೆಲಸವನ್ನು ಮಾಡಿದೆ’ ಎಂದು ಜೋಷಿ ಹೇಳಿದರು.

ಆಜಂ ಖಾನ್‌ ಆಕ್ಷೇಪಾರ್ಹ ಹೇಳಿಕೆ

ಲೋಕಸಭೆಯಲ್ಲಿ ತ್ರಿವಳಿ ತಲಾಕ್‌ ಕುರಿತ ಚರ್ಚೆಯ ವೇಳೆ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಅವರು ಬಿಜೆಪಿ ಸಂಸದೆ ರಮಾ ದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದರು. ಇದು ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.

ಆಜಂ ಖಾನ್ ಅವರು ಬಳಸಿದ ಪದದ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಖಾನ್ ಅವರು ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಖಾನ್ ಅವರು ಬಳಸಿದ ಪದವನ್ನು ಕಡತದಿಂದ ತೆಗೆದು ಹಾಕಲಾಯಿತು.

ತ್ರಿವಳಿ ತಲಾಕ್‌ ಮಸೂದೆಗೆ ಲೋಕಸಭೆ ಒಪ್ಪಿಗೆ

ನವದೆಹಲಿ: ತ್ರಿವಳಿ ತಲಾಕ್‌ ನೀಡುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ–2019’ಕ್ಕೆ ಲೋಕಸಭೆಯಲ್ಲಿ ಗುರುವಾರ ಅನುಮೋದನೆ ದೊರೆತಿದೆ.

ಮಸೂದೆಯಲ್ಲಿ ಹಲವು ಬದಲಾವಣೆ ತರಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು. ತ್ರಿವಳಿ ತಲಾಕ್ ನೀಡುವ
ಪುರುಷನಿಗೆ ಮೂರು ವರ್ಷ ಜೈಲುಶಿಕ್ಷೆ ನೀಡಲು ಮಸೂದೆಯಲ್ಲಿ ಅವಕಾಶವಿದೆ. ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವು. ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಡಿಎಂಕೆ ಸದಸ್ಯರು ಮಸೂದೆ ವಿರೋಧಿಸಿ ಸದನದಿಂದ ಹೊರನಡೆದರು.

ಮಸೂದೆಯನ್ನು ಧ್ವನಿಮತಕ್ಕೆ ಹಾಕಲಾಯಿತು. ಮಸೂದೆ ಪರವಾಗಿ 303 ಸದಸ್ಯರು ಮತ್ತು ವಿರುದ್ಧ 82 ಸದಸ್ಯರು ಮತ ಚಲಾಯಿಸಿದರು. ಈಗ ಮಸೂದೆಯು ರಾಜ್ಯಸಭೆಯ ಅನುಮೋದನೆ ಪಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.