ADVERTISEMENT

ರಾಹುಲ್‌ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರೂ ಸೇರಿ 68 ಮಂದಿಯ ಪದೋನ್ನತಿಗೆ ತಡೆ

ಪಿಟಿಐ
Published 12 ಮೇ 2023, 15:36 IST
Last Updated 12 ಮೇ 2023, 15:36 IST
   

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದ ಸೂರತ್ ಚೀಫ್‌ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಹರೀಶ್ ಹಸ್ಮುಖ್ ಭಾಯಿ ವರ್ಮಾ ಸೇರಿದಂತೆ ಗುಜರಾತ್‌ನ 68 ಮಂದಿ ಕೆಳ ಹಂತದ ನ್ಯಾಯಾಂಗ ಅಧಿಕಾರಿಗಳ ಪದೋನ್ನತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಡೆಹಿಡಿದಿದೆ.

ನ್ಯಾಯಾಂಗ ಅಧಿಕಾರಿಗಳ ಬಡ್ತಿಯು ಗುಜರಾತ್ ರಾಜ್ಯ ನ್ಯಾಯಾಂಗ ಸೇವಾ ನಿಯಮಗಳು 2005ರ ಉಲ್ಲಂಘನೆಯಾಗಿದೆ. ಅರ್ಹತೆ, ಸೇವಾ ಹಿರಿತನ ಮತ್ತು ಸೂಕ್ತ ಪರೀಕ್ಷಾ ಉತ್ತೀರ್ಣತೆಯ ಆಧಾರದ ಮೇಲೆ ಬಡ್ತಿಗಳನ್ನು ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ. ಆರ್. ಷಾ ಮತ್ತು ಸಿ. ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿತು.

‘ನ್ಯಾಯಾಂಗ ಅಧಿಕಾರಿಗಳಿಗೆ ಪದೋನ್ನತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಕಾನೂನುಬಾಹಿರ ಮತ್ತು ಈ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ, ಇದು ಸಮರ್ಥನೀಯವಲ್ಲ’ ಎಂದು ಪೀಠ ಹೇಳಿತು.

ADVERTISEMENT

‘ನಾವು ಬಡ್ತಿ ಪಟ್ಟಿಯ ಅನುಷ್ಠಾನವನ್ನು ತಡೆಹಿಡಿಯುತ್ತೇವೆ. ಬಡ್ತಿ ಹೊಂದಿದವರನ್ನು ಮೂಲ ಹುದ್ದೆಗೆ ಕಳುಹಿಸಲಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ಬಡ್ತಿಗಳಿಗೆ ತಡೆ ನೀಡಿ ಮಧ್ಯಂತರ ಆದೇಶವನ್ನು ಕೋರ್ಟ್‌ ನೀಡಿತು. ಅಲ್ಲದೆ, ‌ ಮೇ 15 ರಂದು ನ್ಯಾಯಮೂರ್ತಿ ಷಾ ನಿವೃತ್ತಿಯಾಗುತ್ತಿರುವ ಕಾರಣ ಈ ಪ್ರಕರಣವನ್ನು ಸೂಕ್ತ ಪೀಠದಿಂದ ವಿಚಾರಣೆ ನಡೆಸುವಂತೆ ಸೂಚಿಸಿತು.

68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರ ಉನ್ನತ ಶ್ರೇಣಿಗೆ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೇಡರ್ ಅಧಿಕಾರಿಗಳಾದ ರವಿಕುಮಾರ್ ಮಾಹೇತಾ ಮತ್ತು ಸಚಿನ್ ಪ್ರತಾಪ್‌ರಾಯ್‌ ಮೆಹ್ತಾ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.