ADVERTISEMENT

ಹಿಂದೂ ಮಹಿಳೆ ಉಯಿಲು ಮಾಡದೇ ಮೃತಪಟ್ಟರೆ, ಆಸ್ತಿ ಮೂಲ ಉತ್ತರಾಧಿಕಾರಿಗೆ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 14:09 IST
Last Updated 20 ಜನವರಿ 2022, 14:09 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಮಕ್ಕಳಿಲ್ಲದ ಹಾಗೂ ಉಯಿಲು ಬರೆಯದ ಹಿಂದೂ ಮಹಿಳೆ ಮರಣ ಹೊಂದಿದಾಗ, ಆಕೆ ಹೊಂದಿದ್ದ ಪೂರ್ವಾರ್ಜಿತ ಆಸ್ತಿ ಪಾಲಕರ ಅಥವಾ ಪತಿಯ ಉತ್ತರಾಧಿಕಾರಿಗಳಿಗೆ ಸೇರುತ್ತದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿನ ನಿಬಂಧನೆಗಳನ್ನು ವಿವರಿಸಿದೆ.

‘ಮಕ್ಕಳು ಇಲ್ಲದ ಹಾಗೂ ಯಾವುದೇ ಉಯಿಲು ಮಾಡಿರದ ಹಿಂದೂ ಮಹಿಳೆ ಮೃತಪಟ್ಟಾಗ, ತಂದೆ ಅಥವಾ ತಾಯಿಯಿಂದ ಆಕೆ ಪಡೆದಿದ್ದ ಆಸ್ತಿ ಪಾಲಕರ ಉತ್ತರಾಧಿಕಾರಿಗಳಿಗೇ ಸೇರುತ್ತದೆ. ಒಂದು ವೇಳೆ, ಪತಿ ಅಥವಾ ಮಾವನಿಂದ ಆಸ್ತಿಯನ್ನು ಪಡೆದಿದ್ದರೆ, ಅಂಥ ಸ್ವತ್ತು ಪತಿಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಪುರುಷ ಹಾಗೂ ಮಹಿಳೆಯರ ಮಧ್ಯೆ ಸಮಾನತೆ ಇರಬೇಕು ಎಂಬುದೇ ಈ ಕಾಯ್ದೆಯ ಮುಖ್ಯ ಉದ್ದೇಶ. ಪೂರ್ವಾರ್ಜಿತ ಆಸ್ತಿ ಮೇಲೆ ಮಹಿಳೆಯೂ ಸಂಪೂರ್ಣ ಹಕ್ಕು ಹೊಂದಿದ್ದಾಳೆ ಎಂಬುದನ್ನು ಈ ಕಾಯ್ದೆ ಸಾರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಅರುಣಾಚಲ ಗೌಂಡರ್‌ ಎಂಬುವವರ ಉತ್ತರಾಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ಹಾಗೂ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿದ ನ್ಯಾಯಪೀಠ, ‘ದುರದೃಷ್ಟವಶಾತ್‌, ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿರುವ ಅಂಶಗಳತ್ತ ಎರಡೂ ಕೋರ್ಟ್‌ಗಳು ಗಮನಹರಿಸಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.