ADVERTISEMENT

ಆಸ್ತಿ ನೋಂದಣಿ ಕಾನೂನು ಬದಲು | ಬೇಬಾಕಿ ಪ್ರಮಾಣಪತ್ರ ವಿತರಣೆ ರದ್ದು: ಅಂಡಮಾನ್ LG

ಪಿಟಿಐ
Published 7 ಜೂನ್ 2025, 9:05 IST
Last Updated 7 ಜೂನ್ 2025, 9:05 IST
<div class="paragraphs"><p>ಅಂಡಮಾನ್ </p></div>

ಅಂಡಮಾನ್

   

ಪೋರ್ಟ್‌ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಆಸ್ತಿ ನೋಂದಣಿಯಲ್ಲಿ ಸುಧಾರಣೆ ತರುವ ಉದ್ದೇಶದೊಂದಿಗೆ  ಕಂದಾಯ ಇಲಾಖೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಲೆಫ್ಟಿನೆಂಟ್ ಗವರ್ನರ್‌ ಮತ್ತು ದ್ವೀಪಗಳ ಅಭಿವೃದ್ಧಿ ಏಜೆನ್ಸಿಯ ಉಪಾಧ್ಯಕ್ಷ ನಿವೃತ್ತ ಅಡ್ಮಿರಲ್‌ ಡಿ.ಕೆ. ಜೋಶಿ ಶನಿವಾರ ಆದೇಶಿಸಿದ್ದಾರೆ. ನಿರಾಕ್ಷೇಪಣಾ ಪತ್ರ ಮತ್ತು ಋಣಭಾರ ರಾಹಿತ್ಯ ಪತ್ರ ವಿತರಣೆ ಸ್ಥಗಿತವೂ ಅದರಲ್ಲಿ ಸೇರಿದೆ.

‘ಈ ಆದೇಶವು ಜೂನ್ 9ರಿಂದ ಕಾರ್ಯರೂಪಕ್ಕೆ ಬರಲಿದೆ. ಆಸ್ತಿ ನೋಂದಣಿಗೆ ಈ ಪತ್ರಗಳು ಅಗತ್ಯವಾಗಿ ಬೇಕಿದ್ದವು. ಆದರೆ ನೋಂದಣಿ ಸಂದರ್ಭದಲ್ಲಿ ಉಪನೋಂದಣಾಧಿಕಾರಿ ಕಂದಾಯ ರಶೀದಿ ಪರಿಶೀಲಿಸುವುದರಿಂದ ಪ್ರತ್ಯೇಕವಾಗಿ ನಿರಾಕ್ಷೇಪಣಾ ಪತ್ರ ಮತ್ತು ಋಣಭಾರ ರಾಹಿತ್ಯ ಪತ್ರ ಸಲ್ಲಿಸುವ ಅಗತ್ಯವಿಲ್ಲ. ಇದರಿಂದ ದ್ವೀಪದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎಂದು ರಾಜ ನಿವಾಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

'ಇವುಗಳೊಂದಿಗೆ ಆಸ್ತಿ ಮೌಲ್ಯಮಾಪನ ಪ್ರಮಾಣಪತ್ರವನ್ನೂ ರದ್ದುಗೊಳಿಸಲಾಗಿದೆ. ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪದಲ್ಲಿ ಮಾತ್ರ ಈ ಪ್ರಮಾಣಪತ್ರ ಸಲ್ಲಿಸುವ ಪದ್ಧತಿ ಇದ್ದು, ದೇಶದ ಯಾವುದೇ ರಾಜ್ಯಗಳಲ್ಲಿಲ್ಲ. ಹೀಗಾಗಿ ಇದನ್ನು ರದ್ದುಗೊಳಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಹೀಗಾಗಿ ಆಸ್ತಿ ನೋಂದಣಿಯು ಇನ್ನು ಮುಂದೆ ಆಯಾ ವೃತ್ತದ ದರಗಳನ್ನು ಆಧರಿಸಿ ನಡೆಯಲಿದೆ’ ಎಂದು ಹೇಳಿದ್ದಾರೆ.

‘ದ್ವೀಪದಲ್ಲಿ ಇಂಧನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ದ್ವೀಪದಲ್ಲಿ ಬೇಡಿಕೆಗೆ ತಕ್ಕಮತೆ ಹೊಸ ಬಂಕ್‌ಗಳನ್ನು ತೆರೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಂಡಮಾನ್ ಮತ್ತು ನಿಕೋಬಾರ್ ಅಂತರ್ಗತ ಅಭಿವೃದ್ಧಿ ನಿಗಮ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಲಾಗಿದೆ.

ದೋಣಿ ಪರವಾನಗಿ ನವೀಕರಣದ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರತಿ ವರ್ಷ ನಡೆಸುತ್ತಿದ್ದ ಸಮೀಕ್ಷೆಯನ್ನೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಲೆಫ್ಟಿನೆಂಟ್ ಗವರ್ನರ್‌ ರದ್ದುಗೊಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.