ADVERTISEMENT

ಉತ್ತರ ಪ್ರದೇಶ: ಶುಕ್ರವಾರದ ಪ್ರಾರ್ಥನೆ ಶಾಂತಿಯುತ

ಪಿಟಿಐ
Published 17 ಜೂನ್ 2022, 14:01 IST
Last Updated 17 ಜೂನ್ 2022, 14:01 IST
ಅಲೀಗಡದ ಮಸೀದಿಯ ಮುಂದೆ ಶುಕ್ರವಾರ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು –ಪಿಟಿಐ ಚಿತ್ರ
ಅಲೀಗಡದ ಮಸೀದಿಯ ಮುಂದೆ ಶುಕ್ರವಾರ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು –ಪಿಟಿಐ ಚಿತ್ರ   

ಲಖನೌ: ಬಿಜೆಪಿಯ ಮಾಜಿ ವಕ್ತಾರರು ಪ್ರವಾದಿ ಮಹಮ್ಮದ್‌ ಬಗ್ಗೆ ನೀಡಿದ್ದ ‘ಅವಹೇಳನಕಾರಿ’ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆದಿದ್ದ ಉತ್ತರ ಪ್ರದೇಶದಲ್ಲಿ ವಾರದ ಬಳಿಕ ಶುಕ್ರವಾರದ ಪ್ರಾರ್ಥನೆ ಶಾಂತಿಯುತವಾಗಿ ನೆರವೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಎಲ್ಲಿಯೂ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ, ಪೊಲೀಸರು ಮತ್ತು ಧಾರ್ಮಿಕ ಮುಖಂಡರ ಪ್ರಯತ್ನದಿಂದ ಮಸೀದಿಗಳಲ್ಲಿ ಶುಕ್ರವಾರ‌ದ ಪ್ರಾರ್ಥನೆ ಶಾಂತಿಯುತವಾಗಿ ನಡೆದಿದೆ’ ಎಂದು ಎಡಿಜಿ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಲಖನೌನ ಜಾಮಾ ಮಸೀದಿಯ ಈದ್ಗಾದಲ್ಲಿ ಪ್ರಾರ್ಥನೆಗೂ ಮುನ್ನ ಮಾತನಾಡಿದ ಮೌಲಾನಾ ಮೊಹಮ್ಮದ್‌ ಮುಷ್ತಾಕ್‌ ಅವರು, ಪ್ರತಿಭಟನೆ ನಡೆಸದಂತೆ ಜನರಲ್ಲಿ ಮನವಿ ಮಾಡಿದ್ದರು. ಮಸೀದಿಗಳು ನಮಾಜ್‌ ಮಾಡುವ ಸ್ಥಳ ಹೊರತು ಪ್ರತಿಭಟನೆ ನಡೆಸುವ ಸ್ಥಳವಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ಲಖನೌನ ‘ಟಿಲೆ ವಾಲಿ’ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಜನರು ಭದ್ರತಾ ಪಡೆಯ ಸಿಬ್ಬಂದಿಗೆ ಗುಲಾಬಿ ಹೂಗಳನ್ನು ನೀಡಿದರು. ಕಳೆದ ವಾರ ಇಲ್ಲಿ ಪ್ರತಿಭಟನೆ ನಡೆದಿತ್ತು. ಸಹರಾನ್‌ಪುರದಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲೀಗಡದಲ್ಲೂ ಯಾವುದೇ ರೀತಿಯ ಪ್ರತಿಭಟನೆಗಳು ನಡೆದಿಲ್ಲ ಎಂದಿದ್ದಾರೆ.

ಪ್ರಯಾಗರಾಜ್‌, ಸಹರಾನ್‌ಪುರ, ಹತ್ರಾಸ್‌, ಅಲೀಗಡ, ಫಿರೋಜಾಬಾದ್‌ ಮತ್ತು ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದ 400 ಮಂದಿಯನ್ನು ಈಚೆಗೆ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.