ADVERTISEMENT

ಆರ್‌ಟಿಐ ತಿದ್ದುಪಡಿಯನ್ನು ಮಾಹಿತಿ ಆಯೋಗದ ಆಯುಕ್ತರೇ ಏಕೆ ವಿರೋಧಿಸುತ್ತಿದ್ದಾರೆ?

ಮಾಹಿತಿ ಹಕ್ಕು ಕಾಯ್ದೆ: ಸಂಸತ್ತು, ವಿಧಾನಸಭೆ ಅಧಿಕಾರ ಮೊಟಕುಗೊಳಿಸುವ ಯತ್ನ ಎಂದ ಆಚಾರ್ಯುಲು

ಪಿಟಿಐ
Published 23 ಜುಲೈ 2018, 3:53 IST
Last Updated 23 ಜುಲೈ 2018, 3:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ತಿದ್ದುಪಡಿ ತರುವ ಕೇಂದ್ರದ ಪ್ರಸ್ತಾವಕ್ಕೆ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆಯುಕ್ತ ಶ್ರೀಧರ ಆಚಾರ್ಯುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಯು ಮಾಹಿತಿ ಆಯೋಗಗಳನ್ನು ದುರ್ಬಲಗೊಳಿಸುತ್ತದೆ ಎಂದು ಹಲವು ಪರಿಣತರು ವಾದಿಸುತ್ತಿದ್ದಾರೆ. ಆಚಾರ್ಯುಲು ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮುಖ್ಯ ಮಾಹಿತಿ ಆಯುಕ್ತ ಆರ್‌.ಕೆ. ಮಾಥುರ್ ಅವರು ರಜೆಯಲ್ಲಿದ್ದಾರೆ. ಹಾಗಾಗಿ ಸಿಐಸಿಯ ಅತ್ಯಂತ ಹಿರಿಯ ಆಯುಕ್ತ ಯಶೋವರ್ಧನ್‌ ಆಜಾದ್‌ ಅವರಿಗೆ ಆಚಾರ್ಯುಲು ಪತ್ರ ಬರೆದಿದ್ದಾರೆ. ಎಲ್ಲ ಮಾಹಿತಿ ಆಯುಕ್ತರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು ಎಂದು ಅವರು ಕೋರಿದ್ದಾರೆ.

ADVERTISEMENT

ಪ್ರಸ್ತಾವಿತ ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸುವುದರ ಜತೆಗೆ ಸಂವಿಧಾನದಲ್ಲಿಯೇ ಅಡಕವಾಗಿರುವ ಭಾರತದ ಗಣರಾಜ್ಯ ವ್ಯವಸ್ಥೆಯನ್ನು ನಿರ್ಲಕ್ಷಿಸುವಂತಿದೆ ಎಂದು ಆಚಾರ್ಯುಲು ಕಳವಳ ವ್ಯಕ್ತಪಡಿಸಿದ್ದಾರೆ. ಆಚಾರ್ಯುಲು ಅವರ ಬೇಡಿಕೆಯ ಬಗ್ಗೆ ಆಯೋಗವು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

‘ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕಿಂತ ಮುಖ್ಯ ಮಾಹಿತಿ ಆಯುಕ್ತರ ಸ್ಥಾನವು ಕೆಳಗೆ ಎಂದು ಕೇಂದ್ರ ಸರ್ಕಾರವು ಭಾವಿಸಿದೆ. ಮಾಹಿತಿ ಹಕ್ಕು ಸಾಂವಿಧಾನಿಕ ಎಂದು ಮಾಹಿತಿ ಹಕ್ಕು ಕಾಯ್ದೆ ಹೇಳುತ್ತದೆ. ಆದರೆ ತಿದ್ದುಪಡಿ ಮಸೂದೆಯು ಇದನ್ನು ಸಾಂವಿಧಾನಿಕ ಹಕ್ಕು ಎಂದು ಪರಿಗಣಿಸುವುದಿಲ್ಲ. ಸಂವಿಧಾನದ 324(1)ನೇ ವಿಧಿ ಪ್ರಕಾರ ಇರುವ ಮತದಾನದ ಹಕ್ಕನ್ನು ಚುನಾವಣಾ ಆಯೋಗವು ಜಾರಿಗೊಳಿಸುತ್ತದೆ. ಅದೇ ರೀತಿಯಲ್ಲಿ ಮೂಲಭೂತ ಹಕ್ಕಾಗಿರುವ ಮಾಹಿತಿ ಹಕ್ಕನ್ನು ಜಾರಿಗೆ ತರುವ ಮಾಹಿತಿ ಆಯೋಗವು ಸಾಂವಿಧಾನಿಕ ಸಂಸ್ಥೆ ಅಲ್ಲ ಎಂದು ಹೇಳುವುದು ಹೇಗೆ’ ಎಂದು ಆಚಾರ್ಯುಲು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಮತದಾನದ ಹಕ್ಕು ಮತ್ತು ಮಾಹಿತಿ ಹಕ್ಕುಗಳೆರಡೂ ಮೂಲಭೂತ ಹಕ್ಕುಗಳಲ್ಲಿ ಸೇರಿವೆ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ. ಹಾಗಾಗಿ ಚುನಾವಣಾ ಆಯೋಗ ಮತ್ತು ಮಾಹಿತಿ ಆಯೋಗಗಳಿಗೆ ಸಮಾನ ಸ್ಥಾನಮಾನ ಇದೆ. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಮುನ್ನ ಹಲವು ಸುತ್ತಿನ ಚರ್ಚೆ ಮತ್ತು ಸಮಾಲೋಚನೆಯ ಬಳಿಕವೇ ಮಾಹಿತಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

‘ಸಂವಿಧಾನ ಪ್ರಕಾರವೇ ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯಾಗಿದೆ. ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಇರುವ ದಾಖಲೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕಾನೂನು ರೂಪಿಸಲು ಅವಕಾಶ ಇಲ್ಲ. ಆದರೆ. ರಾಜ್ಯದ ಅಧಿಕಾರ ಮೊಟಕುಗೊಳಿಸಿರುವುದನ್ನು ‘ಮಾಹಿತಿ ಹಕ್ಕು ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗ’ ಎಂದು ಹೇಳಿಕೊಂಡು ಕೇಂದ್ರವು ಸಮರ್ಥಿಸಿಕೊಳ್ಳುತ್ತಿದೆ’ ಎಂದು ಆಚಾರ್ಯುಲು ವಿವರಿಸಿದ್ದಾರೆ.

2005ರ ಆರ್‌ಟಿಐ ಕಾಯ್ದೆಯು ರಾಜ್ಯಗಳ ಸ್ವಾಯತ್ತ ಅಧಿಕಾರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ರಾಜ್ಯ ಮಾಹಿತಿ ಆಯುಕ್ತರ
ಆಯ್ಕೆಯನ್ನು ರಾಜ್ಯಗಳಿಗೆ ಬಿಟ್ಟು ಕೊಟ್ಟಿದೆ. ಆದರೆ ತಿದ್ದುಪಡಿ ಮಸೂದೆಯು, ರಾಜ್ಯಗಳ ಮಾಹಿತಿ ಆಯುಕ್ತರ ಅಧಿಕಾರಾವಧಿ, ಸ್ಥಾನಮಾನ ಮತ್ತು ವೇತನವನ್ನು ನಿರ್ಧರಿಸುವ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

**

ಆಕ್ಷೇಪ ಏನು?

* ಆರ್‌ಟಿಐ ತಿದ್ದುಪಡಿ ಪ್ರಸ್ತಾವ ಇದೆ ಎಂದು ಇದೇ 18ರಂದು ಸರ್ಕಾರ ಹೇಳಿದೆ

* ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಸಂಸದರಿಗೆ ನೀಡಲಾಗಿದೆ

* ಸಿಇಸಿ ಮತ್ತು ಸಿಐಸಿಗೆ ವೇತನ, ಭತ್ಯೆಯಲ್ಲಿ ಇದ್ದ ಸಮಾನತೆಯನ್ನು ರದ್ದು ಮಾಡುವ ಪ್ರಸ್ತಾವ ಇದೆ

* ತಿದ್ದುಪಡಿ ಪ್ರಸ್ತಾವಕ್ಕೆ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಆಕ್ಷೇಪ‍ ವ್ಯಕ್ತಪಡಿಸಿವೆ

**

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳ ಅಧಿಕಾರವನ್ನು ವಶಕ್ಕೆ ಪಡೆಯಲು ತಿದ್ದುಪಡಿಯ ಮೂಲಕ ಕಾರ್ಯಾಂಗವು ಯತ್ನಿಸುತ್ತಿದೆ.

–ಶ್ರೀಧರ ಆಚಾರ್ಯುಲು, ಕೇಂದ್ರ ಮಾಹಿತಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.