ADVERTISEMENT

ಗೋವಾದಲ್ಲಿ ಹುಲಿ ಅಭಯಾರಣ್ಯ | ಸಿಇಸಿ ವರದಿ ಪರಿಶೀಲಿಸಿ ನಿರ್ಧಾರ: ಸಿಎಂ ಸಾವಂತ್

ಪಿಟಿಐ
Published 26 ನವೆಂಬರ್ 2025, 6:39 IST
Last Updated 26 ನವೆಂಬರ್ 2025, 6:39 IST
<div class="paragraphs"><p>ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್&nbsp;</p></div>

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ 

   

ಪಣಜಿ: ಮಹದಾಯಿ ವನ್ಯಜೀವಿ ಧಾಮವನ್ನು ಹೊರಗಿಟ್ಟು ನಾಲ್ಕು ವನ್ಯಜೀವಿಧಾಮಗಳನ್ನು ಸೇರಿಸಿ ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವರದಿಯನ್ನು ಪರಿಶೀಲಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದ ಕಾಳಿ ಹುಲಿ ಅಭಯಾರಣ್ಯದ ಕೇಂದ್ರ ಭಾಗಕ್ಕೆ ನೇರವಾಗಿ ಹೊಂದಿಕೊಂಡಿರುವ ಮತ್ತು ಕಡಿಮೆ ಮನೆಗಳನ್ನು ಹೊಂದಿರುವ ನೇತ್ರಾವಳಿ ವನ್ಯಜೀವಿ ಅಭಯಾರಣ್ಯ (50 ಮನೆಗಳು) ಮತ್ತು ಕೋಟಿಗಾಂವ್‌ ವನ್ಯಜೀವಿ ಅಭಯಾರಣ್ಯ (41 ಮನೆಗಳು)ಗಳನ್ನು ಮೊದಲ ಹಂತದಲ್ಲಿ ಪ್ರಸ್ತಾವಿತ ಗೋವಾ ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಲು ಪರಿಗಣಿಸಬೇಕು ಎಂದು ಸಿಇಸಿ ತನ್ನ ವರದಿಯಲ್ಲಿ ತಿಳಿಸಿದೆ.

ADVERTISEMENT

ಮಹದಾಯಿ-ಕೋಟಿಗಾಂವ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ನಲ್ಲಿ ನಿರ್ದೇಶನ ನೀಡಿತ್ತು. ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಪಕ್ಕದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅಧಿಸೂಚನೆ ಹೊರಡಿಸುವ ಸಂಬಂಧ ಆರು ವಾರಗಳಲ್ಲಿ ಸಿಇಸಿ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತ್ತು.

ಸಮಿತಿಯು 279 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿದೆ. ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಿ ಗೋವಾ ಸರ್ಕಾರ ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದೂ ಸಿಇಸಿ ಶಿಫಾರಸು ಮಾಡಿದೆ.

ಅಧಿಕ ಸಂಖ್ಯೆಯ ಮನೆಗಳು ಇರುವ ಭಗವಾನ್‌ ಮಹಾವೀರ ವನ್ಯಜೀವಿಧಾಮದ ದಕ್ಷಿಣ ಭಾಗ (ಸುಮಾರು 560 ಮನೆಗಳು) ಹಾಗೂ ಮಹದಾಯಿ ವನ್ಯಜೀವಿಧಾಮವನ್ನು (ಸುಮಾರು 612 ಮನೆಗಳು) ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಿಲ್ಲ. ಈ ಪ್ರದೇಶಗಳನ್ನು ಸೇರಿಸುವ ಮುನ್ನ ನಿರಂತರ ಜಾಗೃತಿ ಮೂಡಿಸಿ ವಿಸ್ತೃತ ಸಮುದಾಯ ಸಮಾಲೋಚನೆಗಳನ್ನು ನಡೆಸುವ ಅಗತ್ಯ ಇದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಮಹದಾಯಿ ವನ್ಯಜೀವಿಧಾಮ ಹಾಗೂ ಆಸುಪಾಸಿನ ಪ್ರದೇಶಗಳನ್ನು ‘ಹುಲಿ ಅಭಯಾರಣ್ಯ’ವೆಂದು ಘೋಷಿಸಲು 3 ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗೋವಾ ಸರ್ಕಾರಕ್ಕೆ 2023ರಲ್ಲಿ ನಿರ್ದೇಶನ ನೀಡಿತ್ತು.

ವನ್ಯಜೀವಿಧಾಮದ ಸಮೀಪ ಜನವಸತಿಗಳಿವೆ ಎಂಬ ಕಾರಣಕ್ಕೆ ಮೀಸಲು ಅರಣ್ಯವಾಗಿ ಘೋಷಿಸಲು ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

ಸಿಇಸಿ ಶಿಫಾರಸುಗಳೇನು? 

  • ಗೋವಾ ಹುಲಿ ಅಭಯಾರಣ್ಯ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿದ ಕೂಡಲೇ ಹುಲಿ ಸಂರಕ್ಷಣಾ ಯೋಜನೆ ರೂಪಿಸಬೇಕು. 

  • ಕಾಳಿ ಹುಲಿ ಮೀಸಲು ಪ್ರದೇಶದೊಂದಿಗೆ ಆವಾಸಸ್ಥಾನವನ್ನು ಬಲಪಡಿಸಬೇಕು. 

  • ಮೂಲಸೌಕರ್ಯ, ಗಣಿ ಹಾಗೂ ಇತರ ಅಭಿವೃದ್ಧಿ ಚಟುವಟಿಕೆಗಳ ಕಡಿವಾಣಕ್ಕೆ ನಿಗಾ ವಹಿಸಬೇಕು

ವರದಿಯಲ್ಲಿನ ಅಂಶಗಳ ಬಗ್ಗೆ ಪರಿಶೀಲನೆ ನಡೆಸುವ ಮೊದಲು ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಪ್ರಸ್ತಾವಿತ ಹುಲಿ ಅಭಯಾರಣ್ಯ ಸ್ಥಾಪನೆಗೆ ಸಂಬಂಧಿಸಿದಂತೆ, ನಮಗೆ ಇನ್ನೂ ವರದಿ ಬಂದಿಲ್ಲ. ವರದಿ ಸ್ವೀಕರಿಸಿದ ಬಳಿಕ ಅದರಲ್ಲಿನ ಶಿಫಾರಸುಗಳನ್ನು ಪರಿಶೀಲಿಸಲಾಗುವುದು ಎಂದು ಸಿಎಂ ಸಾವಂತ್‌ ಹೇಳಿದ್ದಾರೆ.

ಮೊದಲು ವರದಿಯನ್ನು ಪರಿಶೀಲಿಸಲಾಗುವುದು. ಬಳಿಕ ಅದನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ನಿರ್ಧರಿಸುತ್ತೇವೆ. ವರದಿಯನ್ನು ಪರಿಶೀಲಿಸದೆ ನಾನು ಈಗಲೇ ಪ್ರತಿಕ್ರಿಯಿಸುವುದು ನ್ಯಾಯ ಸಮ್ಮತವಲ್ಲ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.