ನವದೆಹಲಿ: ಕೇರಳದ ಕರಾವಳಿಯಲ್ಲಿ ಭಾರತದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದಲ್ಲಿ ಇಟಲಿಯ ಇಬ್ಬರು ನಾವಿಕರ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕರಣವನ್ನು ಮುಕ್ತಾಯಗೊಳಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಹೇಗ್‌ನಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯವು(ಪಿಸಿಎ) ನೀಡಿರುವ ತೀರ್ಪಿನ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಭಾರತದ ಪರವಾಗಿ ತೀರ್ಪು ನೀಡಿದ್ದ ಪಿಸಿಎ, ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ಒದಗಿಸಲು ಆದೇಶಿಸಿತ್ತು. ಆದರೆ, ನಾವಿಕರ ವಿರುದ್ಧ ಭಾರತದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದು ಸೂಚಿಸಿತ್ತು.
ಪ್ರಕರಣವೇನು?: 2012 ಫೆಬ್ರುವರಿಯಲ್ಲಿ ಕೇರಳ ಕರಾವಳಿಯ ಭಾರತದ ಜಲಪ್ರದೇಶದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು
ತೈಲ ಹಡಗು ಎಂ.ವಿ ಎನ್‌ರಿಕಾ ಲೆಕ್ಸಿಯಲ್ಲಿದ್ದ ಇಟಲಿಯ ನಾವಿಕರಾದ ಸಲ್ವಟೋರ್ ಗಿರೋನ್ ಮತ್ತು ಮ್ಯಾಸಿಮಿಲಿಯಾನೊ ಲಟೋರೆ ಹತ್ಯೆ ಮಾಡಿದ್ದಾರೆ ಎಂದು ಭಾರತ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.