ADVERTISEMENT

ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 16:09 IST
Last Updated 24 ಡಿಸೆಂಬರ್ 2025, 16:09 IST
Gurugram: School students take part in a campaign to save Aravali, in Gurugram, Tuesday, Dec. 13, 2022. (PTI Photo) (PTI12_13_2022_000194B)
Gurugram: School students take part in a campaign to save Aravali, in Gurugram, Tuesday, Dec. 13, 2022. (PTI Photo) (PTI12_13_2022_000194B)   

ಜೈಪುರ: ಭೂಪ್ರದೇಶದಿಂದ 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ಮಾತ್ರ ‘ಅರಾವಳಿ ಬೆಟ್ಟ’ ಎಂದು, ಎರಡು ಬೆಟ್ಟಗಳ ನಡುವೆ ಕನಿಷ್ಠ 500 ಮೀಟರ್ ಅಂತರವಿದ್ದರೆ ಮಾತ್ರ ಅದನ್ನು ‘ಅರಾವಳಿ ಪರ್ವತ ಶ್ರೇಣಿ’ ಎಂದು ಕರೆಯಲಾಗುತ್ತದೆ ಎಂಬ ‘ಅರಾವಳಿ’ ಕುರಿತ ಹೊಸ  ವ್ಯಾಖ್ಯಾವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡ ನಂತರ ರಾಜಸ್ಥಾನದಾದ್ಯಂತ ‘ಅರಾವಳಿ ಉಳಿಸಿ’ ಹೋರಾಟ ತೀವ್ರಗೊಂಡಿದೆ.

ಈ  ‘ಹೊಸ ವ್ಯಾಖ್ಯಾನ’ದ ವಿರುದ್ಧ ರಾಜಸ್ಥಾನದ 15 ಜಿಲ್ಲೆಗಳಾದ್ಯಂತ ಪರಿಸರ ಕಾರ್ಯಕರ್ತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ರಾಜಸ್ಥಾನ, ಹರಿಯಾಣ, ದೆಹಲಿ ಮತ್ತು ಗುಜರಾತ್‌ ರಾಜ್ಯಗಳ 692 ಕಿಮೀ ಉದ್ದಕ್ಕೂ ಅರಾವಳಿ ಪರ್ವತ ಶ್ರೇಣಿ ವಿಸ್ತರಿಸಿದೆ.  ರಾಜಸ್ಥಾನದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ 550 ಕಿ.ಮೀಯಷ್ಟು ವಿಸ್ತರಿಸಿಕೊಂಡಿದೆ. ಹೊಸ ವ್ಯಾಖ್ಯಾನದಿಂದ ಈ ಜಿಲ್ಲೆಗಳ ಪರಿಸರದ ಮೇಲೆ ತೀವ್ರ ಪರಿಣಾಮಬೀರಲಿದೆ ಎಂದು ಪ್ರತಿಭಟನಾಕಾರರು ದೂರುತ್ತಿದ್ದಾರೆ.

ADVERTISEMENT

‘ಅರಾವಳಿ ಬೆಟ್ಟ ಶ್ರೇಣಿಗಳು ರಾಜಸ್ಥಾನದ ಅಲ್ವಾರ್, ಭರತ್‌ಪುರ್, ಧೋಲ್‌ಪುರ್, ಕರೌಲಿ, ಜೈಪುರ, ದೌಸಾ, ಸವಾಯಿ ಮಾಧೋಪುರ್‌ನಂತಹ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಭೂಸ್ವರೂಪವಲ್ಲದೇ, ಜೀವನಾಧಾರ ಕೂಡ ಆಗಿದೆ. ಈ ಹೊಸ ಮಾನದಂಡ ಜಾರಿಯಾದರೆ, ಪ್ರಸ್ತುತ ಅರಾವಳಿ ಎಂದು ಗುರುತಿಸಿಕೊಂಡಿರುವ ಶೇ 90ರಷ್ಟು ಭೂಭಾಗ ಕಾನೂನು ರಕ್ಷಣೆಯಿಂದ ಹೊರಗುಳಿಯಲಿದೆ. ಇದರಿಂದಾಗಿ ಸಂರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ದಂಧೆಗಳಿಗೆ ಮುಕ್ತ ಅವಕಾಶ ಸಿಗಲಿದೆ ಎಂಬುದು ಕಾಂಗ್ರೆಸ್ ಹಾಗೂ ಪರಿಸರವಾದಿಗಳ ವಾದವಾಗಿದೆ.

ದೋಷಪೂರಿತ ’ಮರು ವ್ಯಾಖ್ಯಾನ’

ಕೇಂದ್ರ ಸರ್ಕಾರ ‘ಅರಾವಳಿ ಪರ್ವತ ಶ್ರೇಣಿ‘ ಕುರಿತು ದೋಷಪೂರಿತ ಮರುವ್ಯಾಖ್ಯಾನ ನೀಡುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ' ಎಂದು ಆರೋಪಿಸಿರುವ ಕಾಂಗ್ರೆಸ್‌ ಇಂಥ ಮರು ವ್ಯಾಖ್ಯಾನ ಯಾಕೆ ಮಾಡಬೇಕು? ಎಂದು ಪ್ರಶ್ನಿಸಿದೆ.

ಈ ಕುರಿತು ‘ಎಕ್ಸ್‌’ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಅರಾವಳಿ ಪರ್ವತ ಶ್ರೇಣಿಗಳು ಭಾರತದ ನೈಸರ್ಗಿಕ ಪರಂಪರೆಯ ಭಾಗ. ಇದನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಹಾಗಾಗಿ ಅದನ್ನು ತಾಂತ್ರಿಕ ಮರು ವ್ಯಾಖ್ಯಾನದ ಮೂಲಕ ದುರ್ಬಲಗೊಳಿಸಬಾರದು’ ಎಂದು ಹೇಳಿದ್ದಾರೆ. 'ಮೋದಿ ಸರ್ಕಾರ ಅರಾವಳಿ ಪರ್ವತ ಶ್ರೇಣಿ ಕುರಿತು ಅಳವಡಿಸಿಕೊಳ್ಳುತ್ತಿರುವ ಈ ಮರು ವ್ಯಾಖ್ಯಾನವನ್ನು ಭಾರತೀಯ ಅರಣ್ಯ ಸಮೀಕ್ಷೆ ಪರಿಸರ ಮತ್ತು ಅರಣ್ಯ ವಿಷಯಗಳ ಕುರಿತು ಸಲಹೆ ನೀಡಲು ಮೇ 2002ರಲ್ಲಿ ಸುಪ್ರೀಂ ಕೋರ್ಟ್‌ ರಚಿಸಿದ ಮತ್ತು ಡಿಸೆಂಬರ್ 2023ರಲ್ಲಿ ಪುನರ್‌ ರಚಿಸಿದ ಕೇಂದ್ರೀಯ ಅಧಿಕಾರ ಸಮಿತಿ ಮತ್ತು ಸುಪ್ರೀಂ ಕೋರ್ಟ್‌ನ ಅಮಿಕಸ್ ಕ್ಯೂರಿ ವಿರೋಧ ವ್ಯಕ್ತಪಡಿಸಿದೆ’ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.