ADVERTISEMENT

ಜನಪ್ರತಿನಿಧಿ ಕಾಯ್ದೆಯಡಿ ದ್ವೇಷ ಭಾಷಣಕ್ಕೆ ಕಡಿವಾಣ: ಚುನಾವಣಾ ಆಯೋಗ

ಸುಪ್ರೀಂ ಕೋರ್ಟ್‌ಗೆ ಲಿಖಿತ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 16:13 IST
Last Updated 14 ಸೆಪ್ಟೆಂಬರ್ 2022, 16:13 IST
ಚುನಾವಣಾ ಆಯೋಗ 
ಚುನಾವಣಾ ಆಯೋಗ    

ನವದೆಹಲಿ: ‘ಜನಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳ ಮೂಲಕ ರಾಜಕೀಯ ಮುಖಂಡರ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲಾಗುತ್ತಿದೆ’ ಎಂದು ಭಾರತೀಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ದ್ವೇಷ ಭಾಷಣ ಹಾಗೂ ವದಂತಿ ಹರಡುವಿಕೆ ನಿಯಂತ್ರಿಸಲು ಕೇಂದ್ರವು ಶಾಸನಾತ್ಮಕ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಕೋರಿ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಈ ಸಂಬಂಧ ಆಯೋಗವು ಬುಧವಾರ ನ್ಯಾಯಾಲಯಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದೆ.

‘ಯಾವುದೇ ಅಭ್ಯರ್ಥಿ ಅಥವಾ ಆತನ ಪ್ರತಿನಿಧಿ ದ್ವೇಷ ಬಿತ್ತುವ ಅಥವಾ ಧರ್ಮ, ಜಾತಿ, ಜನಾಂಗ, ಸಮುದಾಯ ಮತ್ತು ಭಾಷೆಯ ಆಧಾರದಲ್ಲಿ ಸಮಾಜದ ವಿಭಿನ್ನ ವರ್ಗಗಳ ಜನರ ನಡುವೆ ಹಗೆತನ ಸೃಷ್ಟಿಸಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆಯೋಗ ಹೇಳಿದೆ.

ADVERTISEMENT

‘ಒಂದೊಮ್ಮೆ ಅಭ್ಯರ್ಥಿಯು ದ್ವೇಷ ಭಾಷಣ ಮಾಡಿರುವುದು ಗಮನಕ್ಕೆ ಬಂದರೆ ಆತ ಅಥವಾ ಆಕೆಗೆ ಶೋಕಾಸ್‌ ನೋಟಿಸ್‌ ನೀಡಲಾಗುತ್ತದೆ. ಅವರಿಂದ ವಿವರಣೆ ಪಡೆಯಲಾಗುತ್ತದೆ. ಅದರ ಆಧಾರದಲ್ಲಿ ಅವರನ್ನು ನಿರ್ದಿಷ್ಟ ಸಮಯದವರೆಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗುತ್ತದೆ. ಪದೇ ಪದೇ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸಲಾಗುತ್ತದೆ’ ಎಂದೂ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.