ADVERTISEMENT

ಪುಲ್ವಾಮಾ ದಾಳಿ ದಿನ ಏನೆಲ್ಲಾ ಆಗಿತ್ತು? ಹುತಾತ್ಮರಿಗೆ ಪಿಎಂ, ಉಪರಾಷ್ಟ್ರಪತಿ ನಮನ

ಪಿಟಿಐ
Published 14 ಫೆಬ್ರುವರಿ 2026, 4:48 IST
Last Updated 14 ಫೆಬ್ರುವರಿ 2026, 4:48 IST
<div class="paragraphs"><p>ಪುಲ್ವಾಮಾ ಬಾಂಬ್‌ ಸ್ಫೋಟ </p></div>

ಪುಲ್ವಾಮಾ ಬಾಂಬ್‌ ಸ್ಫೋಟ

   

ಪಿಟಿಐ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಶನಿವಾರ ನಮನ ಸಲ್ಲಿಸಿದರು.

ADVERTISEMENT

ಕರಾಳ ದಿನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡು, ‘2019 ರ ಈ ದಿನದಂದು ಪುಲ್ವಾಮಾದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರರನ್ನು ಸ್ಮರಿಸುತ್ತಾ. ಅವರ ದೇಶಭಕ್ತಿ, ಸಂಕಲ್ಪ ಮತ್ತು ರಾಷ್ಟ್ರಕ್ಕೆ ಮಾಡಿದ ಸೇವೆ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಪ್ರತಿಯೊಬ್ಬ ಭಾರತೀಯನು ಅವರ ಧೈರ್ಯದಿಂದ ಶಕ್ತಿಯನ್ನು ಪಡೆಯುತ್ತಾನೆ’ ಎಂದು ಬರೆದುಕೊಂಡಿದ್ದಾರೆ.

‘ದೇಶಕ್ಕಾಗಿ ಪ್ರಾಣತೆತ್ತ ಸಿಆರ್‌ಪಿಎಫ್‌ ಯೋಧರ ತ್ಯಾಗ ಸದಾ ಸ್ಮೃತಿಪಟಲದಲ್ಲಿ ಉಳಿಯುತ್ತದೆ. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿ ಸಿಬ್ಬಂದಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗ ಬಲಿಷ್ಠ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ’ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಹೇಳಿದ್ದಾರೆ.

2019ರ ಫೆ.14ರಂದು ಆತ್ಮಾಹುತಿ ಬಾಂಬರ್ ತನ್ನ ಸ್ಫೋಟಕ ತುಂಬಿದ್ದ ವಾಹನವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ 40 ಯೋಧರು ಮೃತಪಟ್ಟಿದ್ದರು. ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿತ್ತು

ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ವಾಯುಪಡೆ 2019ರ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿತ್ತು. 

ಪುಲ್ವಾಮಾ ಬಾಂಬ್‌ ಸ್ಫೋಟ ನಡೆದು ಇಂದಿಗೆ (ಫೆ.14) ಏಳು ವರ್ಷವಾಗಿದೆ. 40 ಜನ ಸೈನಿಕರನ್ನು ಬಲಿ ತೆಗೆದುಕೊಂಡಿದ್ದ ಅದು ಭಾರತದ ಪಾಲಿಗೆ ಕಹಿನೆನಪು. ಅಂದು ಏನೆಲ್ಲಾ ಆಗಿತ್ತು, ಇಲ್ಲಿದೆ ಆ ಭೀಕರ ಘಟನೆಯ ನೆನಪು...

ಅಂದು ಫೆಬ್ರುವರಿ 14, ಗುರುವಾರ, ಸಮಯ ಮಧ್ಯಾಹ್ನ 3.15...

  • ಜಮ್ಮು-ಶ್ರೀನಗರ ಹೆದ್ದಾರಿಯ ಪುಲ್ವಾಮಾದ ಅವಂತಿಪುರದಲ್ಲಿ ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ದಾಳಿ ಮಾಡಿತು.

  • ಪುಲ್ವಾಮಾದ ಅವಂತಿಪುರ ಹೆದ್ದಾರಿಯಲ್ಲಿ ಒಟ್ಟು 70 ವಾಹನಗಳಲ್ಲಿ 2500 ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

  • 70 ವಾಹನಗಳು ಸರತಿ ಸಾಲಿನಲ್ಲಿ ತೆರಳುತ್ತಿದ್ದವು. ಈ ಸಾಲಿನಲ್ಲಿ ನಿರ್ದಿಷ್ಟ ಬಸ್‌ ಒಂದರ ಬಳಿಗೆ ಸ್ಫೋಟಕ ತುಂಬಿದ್ದ ಕಾರು ನುಗ್ಗಿಸುವಲ್ಲಿ ಯಶಸ್ವಿಯಾಗಿದ್ದ ಉಗ್ರರು ಎರಡು ಬಸ್‌ಗಳನ್ನು ಸ್ಫೋಟಿಸಿದ್ದರು.

  • ಜೈಷ್‌–ಇ– ಮೊಹಮ್ಮದ್‌ ಉಗ್ರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದರು.

  • ಹುತಾತ್ಮ 40 ಸೈನಿಕರ ಪೈಕಿ ಉತ್ತರ ಪ್ರದೇಶದ 12 ಯೋಧರು, ರಾಜಸ್ತಾನದ 5, ಪಂಜಾಬ್ 4, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ, ಬಿಹಾರ, ಮಹಾರಾಷ್ಟ್ರ, ತಮಿಳುನಾಡಿನ ತಲಾ ಇಬ್ಬರು ಹಾಗೂ ಅಸ್ಸಾಂ, ಕಾಶ್ಮೀರ, ಹಿಮಾಚಲ ಪ್ರದೇಶ, ಕೇರಳ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕದ ತಲಾ ಒಬ್ಬರು ಯೋಧರು ಹುತಾತ್ಮರಾಗಿದ್ದರು.

  • ಮಂಡ್ಯದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್.ಗುರು ಹುತಾತ್ಮನಾದ ಕರ್ನಾಟಕದ ಯೋಧ.

  • ಉಗ್ರರು ಸ್ಫೋಟಕ್ಕೆ 350 ಕೆ.ಜಿ ಸ್ಪೋಟಕ ಬಳಸಿದ್ದರು. ಹಾಗೂ ಸ್ಕಾರ್ಪಿಯೊ ಕಾರು ಬಳಕೆ ಮಾಡಿದ್ದರು.

  • ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು.

  • ಜೈಷ್‌–ಇ– ಮೊಹಮ್ಮದ್‌ ಸಂಘಟನೆಯ ಸ್ಥಳೀಯ ಉಗ್ರ ಆದಿಲ್‌ ಅಹ್ಮದ್ ಆತ್ಮಾಹುತಿ ಬಾಂಬರ್‌ ಆಗಿದ್ದ. ಪುಲ್ವಾಮಾ ಜಿಲ್ಲೆಯ ಕಾಕಪೋರಾ ಮೂಲದ ಇವನು 2018ರಲ್ಲಿ ಜೈಷ್‌–ಇ– ಸಂಘಟನೆ ಸೇರಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.