ADVERTISEMENT

ಪುಲ್ವಾಮಾ ದಾಳಿ: ಭದ್ರತಾ ಪಡೆಗಳಿಂದ ಶಂಕಿತ ಸಂಚುಕೋರ ಘಾಜಿ ರಶೀದ್ ಹತ್ಯೆ

ಏಜೆನ್ಸೀಸ್
Published 18 ಫೆಬ್ರುವರಿ 2019, 18:24 IST
Last Updated 18 ಫೆಬ್ರುವರಿ 2019, 18:24 IST
   

ಶ್ರೀನಗರ: ಪುಲ್ವಾಮಾ ಆತ್ಮಾಹುತಿ ದಾಳಿಯ ಪ್ರಮುಖ ಸಂಚುಕೋರ ಹಾಗೂ ಪಾಕಿಸ್ತಾನ ಮೂಲದ ಜೈಷ್– ಎ– ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಮುಖ್ಯ ಕಾರ್ಯಾಚರಣೆ ಕಮಾಂಡರ್‌ ಕಮ್ರಾನ್‌ ಎಂಬಾತನನ್ನು ಭಾರತೀಯ ಸೇನೆ ಸೋಮವಾರ ಹೊಡೆದು ಉರುಳಿಸಿದೆ.

ಜೈಷ್‌–ಎ–ಮೊಹಮ್ಮದ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನ ಬಲಗೈ ಬಂಟನಾಗಿದ್ದ ಕಮ್ರಾನ್‌ ಸೇರಿದಂತೆ ಮೂವರು ಉಗ್ರರನ್ನು ಮುಗಿಸುವ ಮೂಲಕ ಸೇನೆಯು ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಭಾರತೀಯ ಸೇನೆಯ ಮೇಜರ್‌ ಸೇರಿದಂತೆ ನಾಲ್ವರು ಯೋಧರು ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.

ADVERTISEMENT

ಸಿಆರ್‌ಪಿಎಫ್‌ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆದ ಸ್ಥಳದಿಂದ 12 ಕಿ.ಮೀ ದೂರದ ಪಿಂಗ್ಲಿನಾ ಗ್ರಾಮದ ಮನೆಯೊಂದರಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಸುಳಿವು ಪಡೆದ ಸೇನೆ ಭಾನುವಾರ ರಾತ್ರಿಯೇ ಅಡಗುತಾಣವನ್ನು ಸುತ್ತುವರಿದಿದ್ದರು.

18 ತಾಸು ಕಾರ್ಯಾಚರಣೆ

ಮನೆಯಿಂದ ಹೊರ ಬರದಂತೆ ಗ್ರಾಮಸ್ಥರಿಗೆ ಸೂಚಿಸಿದ್ದ ಸೇನೆ ಭಾನುವಾರ ರಾತ್ರಿಯೇ ಕಾರ್ಯಾಚರಣೆಗೆ ಇಳಿದಿತ್ತು. ಸತತ 18 ತಾಸುಗಳ ನಂತರ ಸೋಮವಾರ ಕಾರ್ಯಾಚರಣೆ ಕೊನೆಗೊಂಡಿದೆ.

ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೇಜರ್‌ ವಿ.ಎಸ್‌. ಧೋಂಡಿಯಾಲ್‌ ಸೇರಿದಂತೆ ಐವರು ಹುತಾತ್ಮರಾಗಿದ್ದಾರೆ. ಡಿಐಜಿ ಮತ್ತು ಬ್ರಿಗೇಡಿಯರ್‌ ಸೇರಿದಂತೆ 10 ಜನರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.

ಕಮ್ರಾನ್‌ ಪಾಕ್‌ ಪ್ರಜೆ

ಹತರಾದ ಮೂವರು ಉಗ್ರರಲ್ಲಿ ಇಬ್ಬರ ಗುರುತು ಮಾತ್ರ ಸಿಕ್ಕಿದೆ. ಅದರಲ್ಲಿ ಕಮ್ರಾನ್ ಪಾಕಿಸ್ತಾನದ ಪ್ರಜೆಯಾಗಿದ್ದು, ಮತ್ತೊಬ್ಬ ಉಗ್ರನನ್ನು ಸ್ಥಳೀಯ ನಿವಾಸಿ ಹಿಲಾಲ್‌ ಅಹಮ್ಮದ್‌ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಬಾಂಬ್‌ ತಯಾರಿಕೆಯಲ್ಲಿ ನಿಸ್ಸೀಮರಾಗಿದ್ದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

2017ರಿಂದ ಕಮ್ರಾನ್‌ ಪುಲ್ವಾಮಾದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುವ ಕೆಲಸದಲ್ಲಿ ತೊಡಗಿದ್ದ. ಆತನ ವಿರುದ್ಧ ಅನೇಕ ಭಯೋತ್ಪಾದನಾ ಪ್ರಕರಣ ದಾಖಲಾಗಿವೆ.

ಸೇನೆಯು ಉಗ್ರರು ಅಡಗಿದ್ದ ಮನೆಯನ್ನೇ ಉಡಾಯಿಸಿದ್ದು, ಉಗ್ರರೊಂದಿಗೆ ಮನೆಯ ಮಾಲೀಕ ಸಹ ಮೃತಪಟ್ಟಿದ್ದಾನೆ. ಸಂಜೆಯವರೆಗೂ ಯೋಧರತ್ತ ಗುಂಡಿನ ಸುರಿಮಳೆಗೈಯುತ್ತಿದ್ದ ಮೂರನೇ ಉಗ್ರನನ್ನು ಕೊನೆಗೆ ಹೊಡೆದುರುಳಿಸಲಾಯಿತು. ಸ್ಥಳದಿಂದ ಎಕೆ–47 ಬಂದೂಕು, ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ.

ಪಾಕ್‌ ಏಕಾಂಗಿ: ಭಾರತ ಯಶಸ್ವಿ

ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನವನ್ನು ಜಾಗತಿಕ ಸಮುದಾಯದಲ್ಲಿ ಏಕಾಂಗಿಯಾಗಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್‌ ಹೇಳಿದ್ದಾರೆ.

40ಕ್ಕೂ ಹೆಚ್ಚು ರಾಷ್ಟ್ರಗಳು ಪಾಕಿಸ್ತಾನದ ವಿರುದ್ಧ ಕಟುವಾದ ಹೇಳಿಕೆ ನೀಡಿವೆ. ಇದು ಭಾರತದ ವಿದೇಶಾಂಗ ನೀತಿಗಳಿಗೆ ಸಂದ ಮೊದಲ ಜಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ದುಡುಕಿನ ನಿರ್ಧಾರ ಸರಿಯಲ್ಲ. ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿ ಅಡಗಿ ಕುಳಿತ ವಿಷಯ ತಿಳಿದಿದ್ದರೂ ಅಮೆರಿಕ ಒಂದೇ ದಿನದಲ್ಲಿ ಆತನನ್ನು ಹೊಡೆದು ಉರುಳಿಸಲಿಲ್ಲ. ತಂತ್ರ ರೂಪಿಸಿ ಹೊಡೆದು ಉರುಳಿಸಿತು. ನಾವು ಕೂಡ ಕಾಯ್ದು ನೋಡುವ ತಂತ್ರ ಅನುಸರಿಸಬೇಕು. ನಮ್ಮ ಸೇನೆಯನ್ನು ಬೆಂಬಲಿಸೋಣ’ ಎಂದು ಅವರು ಹೇಳಿದ್ದಾರೆ.

ಪಾಕ್‌ ಹೈಕಮಿಷನರ್‌ ವಾಪಸ್

ಭಾರತದಲ್ಲಿಯ ತನ್ನ ಹೈಕಮಿಷನರ್‌ ಸೊಹೈಲ್‌ ಮಹಮೂದ್‌ ಅವರನ್ನು ಪಾಕಿಸ್ತಾನ ಸೋಮವಾರ ವಾಪಸ್‌ ಕರೆಸಿಕೊಂಡಿದೆ.

ಪಾಕಿಸ್ತಾನದಿಂದ ಭಾರತ ತನ್ನ ಹೈಕಮಿಷನರ್‌ ಅನಿಲ್‌ ಬಿಸಾರಿಯಾ ಅವರನ್ನು ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ಸೊಹೈಲ್‌ ಮಹಮೂದ್‌ ಸೋಮವಾರ ಬೆಳಿಗ್ಗೆ ದೆಹಲಿಯಿಂದ ಪಾಕಿಸ್ತಾನಕ್ಕೆ ಮರಳಿದ್ದಾರೆ. ಸಮಾಲೋಚನೆಗಾಗಿ ಅವರನ್ನು ಕರೆಸಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.