
ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಿನ್ನ ಕೈವಾಡವಿದೆ ಎಂದು 32 ವರ್ಷದ ವ್ಯಕ್ತಿಯೊಬ್ಬರಿಗೆ ಬೆದರಿಸಿ ₹10 ಲಕ್ಷ ವಂಚನೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿಗಳು ಭಯೋತ್ಪಾದನಾ ನಿಗ್ರಹ ದಳದವರು(ಎಟಿಎಸ್) ಎಂದು ಸಂತ್ರಸ್ತನ ಎದುರು ಬಿಂಬಿಸಿಕೊಂಡು, ವಂಚನೆ ಎಸಗಿದ್ದಾರೆ.
ದೆಹಲಿಯ ಕರೋಲ್ ಬಾಗ್ ನಿವಾಸಿಯೊಬ್ಬರು ಅಕ್ಟೋಬರ್ 14ರಂದು ದೂರು ನೀಡಿದ್ದು, ‘ಆಗಸ್ಟ್ 13 ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಿನ್ನ ಕೈವಾಡವಿದೆ. ಕಾಶ್ಮೀರದಲ್ಲಿ ನಿನ್ನ ಹೆಸರಿನ ಬ್ಯಾಂಕ್ ಖಾತೆಗೆ ₹ 50 ಲಕ್ಷ ಹಣವನ್ನು ಜಮಾವಣೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದರು’ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.
ಮೂರು ಬೇರೆ ಬೇರೆ ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿದ ಆರೋಪಿಗಳು, ವಿಚಾರಣೆ ಮಾಡುವ ನಾಟಕವಾಡಿ ಬ್ಯಾಂಕ್ ಖಾತೆಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಈ ಸುದ್ದಿಯನ್ನು ಗೌಪ್ಯವಾಗಿಡಿ. ಕುಟುಂಬ ಸದಸ್ಯರಿಗೂ ಕೂಡ ತಿಳಿಸಬೇಡ. ಇದರಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡವಿದೆ ಎಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ ಅಕ್ರಮ ಹಣವನ್ನು ಸಕ್ರಮವಾಗಿಸುತ್ತೇವೆ ಎಂದು ಒತ್ತಡ ಹೇರಿದ್ದಾರೆ. ಸಂತ್ರಸ್ತನು ಬ್ಯಾಂಕ್ ಮೂಲಕ ₹8.9 ಲಕ್ಷ ಹಾಗೂ ಯುಪಿಐ ಮೂಲಕ ₹77 ಸಾವಿರ ಹಣವನ್ನು ಆರೋಪಿಗಳಿಗೆ ವರ್ಗಾಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಮೊತ್ತ ಸ್ವೀಕರಿಸಲಾಗಿದೆ ಎಂದು ನಕಲಿ ಬಿಲ್ ಕಳಿಸಿ, ಪ್ರಕರಣದಿಂದ ಬಿಡುಗಡೆಗೊಳಿಸಲು ₹4 ಲಕ್ಷ ಹಣವನ್ನು ಹಾಕಲು ಒತ್ತಾಯಿಸಿದ್ದಾರೆ. ಸಂತ್ರಸ್ತನು ಅದನ್ನು ನಿರಾಕರಿಸಿದ ತಕ್ಷಣವೇ ಅವರು ಪೋನ್ ಅನ್ನು ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.