ADVERTISEMENT

ಶಿವಾಜಿ–ಟಿಪ್ಪು ವಿವಾದ: ಪುಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ಘರ್ಷಣೆ

ಪಿಟಿಐ
Published 15 ಫೆಬ್ರುವರಿ 2026, 14:52 IST
Last Updated 15 ಫೆಬ್ರುವರಿ 2026, 14:52 IST
<div class="paragraphs"><p>ಕಾಂಗ್ರೆಸ್ ಹಾಗೂ ಬಿಜೆಪಿ ಭಾವುಟ</p></div>

ಕಾಂಗ್ರೆಸ್ ಹಾಗೂ ಬಿಜೆಪಿ ಭಾವುಟ

   

ಮುಂಬೈ/ಪುಣೆ: ಮಹಾರಾಷ್ಟ್ರದಲ್ಲಿ ಶಿವಾಜಿ– ಟಿಪ್ಪು ವಿವಾದವು ತಾರಕಕ್ಕೇರಿದ್ದು, ಪುಣೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಒಂಬತ್ತು ಮಂದಿ ಭಾನುವಾರ ಗಾಯಗೊಂಡಿದ್ದಾರೆ.

ಕಾಂಗ್ರೆಸ್‌ ಕಚೇರಿ ಮುಂಭಾಗ ಬಿಜೆಪಿಗರು ಪ್ರತಿಭಟನೆ ನಡೆಸುತ್ತಿದ್ದಾಗ, ಕಾಂಗ್ರೆಸ್‌ ಕಾರ್ಯಕರ್ತರು ಮುಖಾಮುಖಿಯಾಗಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.

ADVERTISEMENT

ಕಾಂಗ್ರೆಸ್‌ನ ಮೂವರು, ಬಿಜೆಪಿಯ ಇಬ್ಬರು, ತಲಾ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಂಜನ್ ಕುಮಾರ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್‌ ಭವನದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಧಿಕ್ಕಾರ ಹಾಕಿದರು.  ಎರಡೂ ಕಡೆಯಿಂದಲೂ ಕಲ್ಲು ತೂರಾಟ ನಡೆದಿದ್ದು, ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಶರ್ಮಾ ತಿಳಿಸಿದ್ದಾರೆ.

ಪಾಟೀದ್ ಪವನ್ ಸಂಘದವರು ಸಹ ಕಾಂಗ್ರೆಸ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಶಿವಸೇನಾ (ಯುಬಿಟಿ) ಈ ವಿವಾದದಿಂದ ದೂರ ಉಳಿದಿದೆ. ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪಕಾಲ್‌ ಕ್ಷಮೆಯಾಚನೆಗೆ ಎಂಎನ್‌ಎಸ್‌ ಆಗ್ರಹಿಸಿದೆ.

ಹಿಂದೂಗಳ ಭಾವನೆಗಳಿಗೆ ಸಪಕಾಲ್ ಅವರು ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಪಾರ್ವತಿ ಪೊಲೀಸ್ ಠಾಣೆಗೆ ಬಿಜೆಪಿ ಪುಣೆ ನಗರ ಘಟಕದ ಅಧ್ಯಕ್ಷ ಧೀರಜ್ ಘಾಟೆ ಅವರು ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ.

ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ಲಿಖಿತ ದೂರು ನೀಡಲಾಗಿದೆ. ಮೇಯರ್ ಮಂಜುಶಾ ನಾಗ್ಪುರೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಧೀರಜ್ ಘಾಟೆ, ದುಶ್ಯಂತ್ ಮೊಹೋಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಪುಣೆ ನಗರ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ್ ಶಿಂದೆ ಹೇಳಿದ್ದಾರೆ.

ಸಪಕಾಲ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕ ಸಚಿನ್ ಸಾವಂತ್ ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ. ಕೇಸರಿ ಪಕ್ಷದ ಮುಖಂಡರು ಟಿಪ್ಪು ಸುಲ್ತಾನ್‌ ಅವರನ್ನು ಹೊಗಳಿರುವುದನ್ನು ಉಲ್ಲೇಖಿಸಿ, ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪ್ರತಿಭಟಿಸುತ್ತಿದ್ದಾರಷ್ಟೇ ಎಂದಿದ್ದಾರೆ.

ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ನಿಲುವನ್ನು ಪುಣೆಯ ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಪ್ರಶಾಂತ್ ಜಗತಾಪ್ ಖಂಡಿಸಿದ್ದಾರೆ.

ಎಐಎಂಐಎಂ ಅಧ್ಯಕ್ಷ, ಹೈದರಾಬಾದ್‌ ಸಂಸದ ಅಸಾದುದ್ದೀನ್ ಒವೈಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಸುಲ್ತಾನ್‌ ಕೊಡುಗೆಗಳನ್ನು ಬಣ್ಣಿಸಿದ್ದಾರೆ.

Highlights -

ವಿವಾದದ ಮೂಲ ಮಾಲೆಗಾಂವ್‌

ಉಪ ಮೇಯರ್‌ ಕಚೇರಿಯಲ್ಲಿ ಟಿಪ್ಪು ಸುಲ್ತಾನ್‌ ಅವರ ಭಾವಚಿತ್ರವನ್ನು ಹಾಕಿರುವುದು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಮಾಲೆಗಾಂವ್‌ನ ಉಪ ಮೇಯರ್ ಆದ ಸಮಾಜವಾದಿ ಪಕ್ಷದ ಶಾನ್‌–ಇ–ಹಿಂದ್‌ ನಿಹಾಲ್‌ ಅಹ್ಮದ್‌ ಅವರು ತಮ್ಮ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಅವರ ಫೋಟೊ ಹಾಕಿದ್ದು ವಿವಾದ ಸೃಷ್ಟಿಸಿತ್ತು. ಶಿವಸೇನಾ (ಶಿಂದೆ ಬಣ) ಕಾರ್ಪೊರೇಟರ್‌ಗಳು ಹಿಂದೂ ಸಂಘಟನೆಗಳು ಉಪಮೇಯರ್ ಅವರ ನಿಲುವನ್ನು ವಿರೋಧಿಸಿವೆ. ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮತ್ತು ಅವರು ‘ಸ್ವರಾಜ್ಯ’ದ ಕಲ್ಪನೆಯನ್ನು ಪ್ರಸ್ತುತಪಡಿಸಿದ ವಿಧಾನವನ್ನು ಸೂಚಿಸುವಾಗ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪಕಾಲ್‌ ಅವರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಟಿಪ್ಪು ಸುಲ್ತಾನ್ ಕರೆ ನೀಡಿದ್ದ ಉದಾಹರಣೆಯನ್ನು ನೀಡಿದರು. ಈ ಹೇಳಿಕೆಯು ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿ– ಕಾಂಗ್ರೆಸ್‌ ನಡುವೆ ವಾಕ್ಸಮರ ಸೃಷ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.