ADVERTISEMENT

ಪುಣೆ | ಸಬ್‌ ಇನ್‌ಸ್ಪೆಕ್ಟರ್‌ನಿಂದ ಅತ್ಯಾಚಾರ ಆರೋಪ; ವೈದ್ಯೆ ಆತ್ಮಹತ್ಯೆ

ಪಿಟಿಐ
Published 24 ಅಕ್ಟೋಬರ್ 2025, 15:45 IST
Last Updated 24 ಅಕ್ಟೋಬರ್ 2025, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಇಲ್ಲಿನ ಸತಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ 28 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿಯೊಬ್ಬರು ಅತ್ಯಾಚಾರವೆಸಗಿ, ಮಾನಸಿಕ ಕಿರುಕುಳ ನೀಡಿದ್ದರು ಎಂದು ಸಾವಿಗೂ ಮುನ್ನ ಅಂಗೈನಲ್ಲಿ ಬರೆದಿಟ್ಟಿದ್ದಾರೆ.

ಪ‍ಲಠಾಣಾದಲ್ಲಿರುವ ಹೋಟೆಲ್‌ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವೈದ್ಯೆಯ ದೇಹವು ಗುರುವಾರ ರಾತ್ರಿ ಪತ್ತೆಯಾಗಿತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಡ್‌ ಜಿಲ್ಲೆಯ ಪ‍ಲಠಾಣಾ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಕೆಲಸ ಮಾಡುತ್ತಿದ್ದರು.

‘ವೈದ್ಯೆ ಬರೆದಿಟ್ಟ ಪತ್ರದಲ್ಲಿ ಉಲ್ಲೇಖಿಸಿದ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತುಷಾರ್‌ ದೋಷಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸೂಚಿಸಿದ್ದಾರೆ.

ADVERTISEMENT

‘ಸತಾರ ಜಿಲ್ಲೆಯ ಸಬ್‌ ಇನ್‌ಸ್ಪೆಕ್ಟರ್‌ ಗೋಪಾಲ್‌ ಬದನೆ ಹಲವು ಬಾರಿ ಅತ್ಯಾಚಾರವೆಸಗಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಪ್ರಶಾಂತ್‌ ಬನಕರ್‌ ಮಾನಸಿಕ ಕಿರುಕುಳ ನೀಡಿದ್ದರು. ಅಸ್ವಾಭಾವಿಕ ಸಾವಿನ ಪ್ರಕರಣದ ವೈದ್ಯಕೀಯ ವರದಿಯನ್ನು ಬದಲಾಯಿಸಲು ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಆರೋಪಿಗಳನ್ನು ಆಸ್ಪತ್ರೆಗೆ ಕರೆತಂದ ವೇಳೆ ವರದಿಯನ್ನು ಮಾರ್ಪಡಿಸುವಂತೆ ಒತ್ತಾಯಿಸಲಾಗುತ್ತಿತ್ತು’ ಎಂದು ವೈದ್ಯೆಯು ಅಂಗೈನಲ್ಲಿ ಬರೆದಿದ್ದಾರೆ.

‘ಆರೋಪಿ ಗೋಪಾಲ್‌ ವಿರುದ್ಧ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯು ಅಂಗೈನಲ್ಲಿ ಬರೆದ ಎಲ್ಲಾ ಆರೋಪಗಳ ಕುರಿತಂತೆ, ತನಿಖೆ ನಡೆಸಲಾಗುವುದು’ ಎಂದು ಸತಾರ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ವೈದ್ಯೆಯ ಆತ್ಮಹತ್ಯೆಯ ಕುರಿತು ಸತಾರ ಸಿವಿಲ್‌ ಸರ್ಜನ್‌ ಜೊತೆಗೆ ಮಾತುಕತೆ ನಡೆಸಿದ್ದು, ಯಾವುದೇ ರೀತಿಯ ಕಿರುಕುಳ ನೀಡಿದ ಕುರಿತು ದೂರು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ’ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಮೇಘನಾ ಬೊರ್ಡಿಕರ್ ತಿಳಿಸಿದ್ದಾರೆ.

ಸಾವಿಗೂ ಮುನ್ನ ಆರೋಪಿಗೆ ಕರೆ: ವೈದ್ಯೆಯು ಆತ್ಮಹತ್ಯೆಗೂ ಮುನ್ನ ಆರೋಪಿ, ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್‌ ಬನಕರ್‌ಗೆ ಕರೆ ಮಾಡಿ ಮಾತನಾಡಿದ್ದರು, ಅಲ್ಲದೇ, ಹಲವು ಸಂದೇಶಗಳನ್ನು ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಶಾಂತ್‌ ಅವರ ತಂದೆ ಮಾಲೀಕತ್ವದ ಫ್ಲ್ಯಾಟ್‌ನಲ್ಲಿಯೇ ವೈದ್ಯೆಯು ಬಾಡಿಗೆಗಿದ್ದರು. ಸಾವಿಗೂ ಮುನ್ನ ಆತನಿಗೆ ಕರೆ ಮಾಡಿ ಮಾತನಾಡಿ, ನಂತರ ಸಂದೇಶವನ್ನು ಕಳುಹಿಸಿದ್ದರು‘ ಎಂದು ಹೇಳಿದ್ದಾರೆ.

‘ಅವಳು ಪ್ರತಿಭಾವಂತೆ ಹಾಗೂ ಮಹತ್ವಾಕಾಂಕ್ಷಿಯಾಗಿದ್ದಳು. ಕೆಲಸದಲ್ಲಿ ಹೆಚ್ಚಿದ ಒತ್ತಡದಿಂದಲೇ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು’ ಎಂದು ಸಂತ್ರಸ್ತೆಯ ಚಿಕ್ಕಮ್ಮ ಪ್ರಗ್ಯಾ ಮುಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎರಡು ದಿನಗಳ ಹಿಂದಷ್ಟೇ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿರುವುದನ್ನು ತಿಳಿಸಿದ್ದಳು. ಆದಾದ ಎರಡು ದಿನಗಳಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮತ್ತೊಬ್ಬ ಸಂಬಂಧಿ ತಿಳಿಸಿದ್ದಾರೆ.

‘ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸತಾರ ಜಿಲ್ಲೆಯ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದೊಂದು ದುರದೃಷ್ಟಕರ ಘಟನೆಯಾಗಿದೆ’ ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಛಕಾಂಕರ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ ಕಿಡಿ: ‘ವೈದ್ಯೆಯ ಆತ್ಮಹತ್ಯೆಯು ಅತ್ಯಂತ ಗಂಭೀರ ಘಟನೆಯಾಗಿದ್ದು, ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕುಸಿದುಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ. ಫಡಣವೀಸ್‌ ನೇತೃತ್ವದ ಸರ್ಕಾರವು ಮಹಿಳೆಯರನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ವಕ್ತಾರ ಸಚಿನ್‌ ಸಾವಂತ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.